- Home
- /
- ಸತ್ಯ ಪರಿಶೀಲನೆಗಳು
- /
- ಕುಕ್ಕೆ ಸುಬ್ರಹ್ಮಣ್ಯ...
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಕ್ರೈಸ್ತ ಧರ್ಮದವರಲ್ಲ
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಒ) ಆಗಿ ಯೇಸುರಾಜ್ ನೇಮಕಗೊಂಡಿದ್ದಾರೆ. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಇಒ ಆಗಿ ನೇಮಕ ಮಾಡಲಾಗಿದೆ.
ಅಧಿಕಾರಿ ಯೇಸುರಾಜ್ ಅವರ ಹೆಸರನ್ನು ನೋಡಿ, ಅವರು ಕ್ರೈಸ್ತ ಧರ್ಮದವರು ಎಂದು ಅನೇಕರು ಭಾವಿಸಿದ್ದರು. ಕೆಲ ಹಿಂದುತ್ವ ಮುಖಂಡರು ಯೇಸುರಾಜ್ ಅವರು ಹಿಂದೂವೋ ಅಥವಾ ಮತಾಂತರಗೊಂಡ ಕ್ರಿಶ್ಚಿಯನೋ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದರು.
ಫ್ಯಾಕ್ಟ್‌ಚೆಕ್ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಯೇಸುರಾಜ್ ಅವರು ಹಿಂದೂ ಧರ್ಮದವರು ಎಂಬುವುದನ್ನು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿಯವರು ಸ್ಪಷ್ಟಪಡಿಸಿದ್ದಾರೆ.
ಯೇಸುರಾಜ್ ಅವರು ಕ್ರೈಸ್ತ ಧರ್ಮದವರು ಎಂಬ ಸುದ್ದಿಯನ್ನು ಸಚಿವರು ತಳ್ಳಿ ಹಾಕಿದ್ದು, ಯೇಸುರಾಜ್ ಅವರ ಶಾಲಾ ವರ್ಗಾವಣೆ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಹಂಚಿಕೊಂಡಿದ್ದಾರೆ.
ಸಚಿವರು ಹಂಚಿಕೊಂಡಿರುವ ದಾಖಲೆಗಳ ಪ್ರಕಾರ, ಅಧಿಕಾರಿ ಯೇಸುರಾಜ್ ಅವರು ಮೂಲತಃ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನವರು ಮತ್ತು ಪರಿಶಿಷ್ಟ ಜಾತಿ (ಆದಿ ಕರ್ನಾಟಕ) ಯವರು ಎಂದು ತಿಳಿದು ಬಂದಿದೆ. ಹಾಗಾಗಿ, ಕುಕ್ಕೆ ದೇವಸ್ಥಾನಕ್ಕೆ ಕ್ರೈಸ್ತ ಧರ್ಮದ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ದೃಢೀಕರಿಸಬಹುದು.
ಅಧಿಕಾರಿ ಯೇಸುರಾಜ್ ಕುರಿತು ದಾಖಲೆಗಳನ್ನು ಹಂಚಿಕೊಂಡಿರುವ ಸಚಿವರು ” ಬಿಜೆಪಿಯ ಮತ್ತೊಂದು ಫೇಕ್ ವಾಟ್ಸಪ್ ಯುನಿವರ್ಸಿಟಿಯ ಸುಳ್ಳು ಸುದ್ದಿ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಎಇಓ ಏಸುರಾಜ್ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವವರೆಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ಬಿಜೆಪಿಯವರ ಮತ್ತೊಂದು ಸುಳ್ಳು ಹಬ್ಬಿಸುವ ಸೋಶಿಯಲ್ ಮೀಡಿಯಾ ವಾಟ್ಸಾಪ್ ಫೇಕ್ ಯುನಿವರ್ಸಿಟಿ ಆಟವಾಗಿದೆ. ಅವರು ಹಿಂದುಳಿದ ಜಾತಿಗೆ ಸೇರಿದವರಾಗಿದ್ದು, ದಾಖಲೆಗಳು ಇಲ್ಲಿವೆ.
ರಾಜ್ಯದಲ್ಲಿ ಇನ್ನೊಂದು ಹಂತದ ಚುನಾವಣೆ ಹತ್ತಿರ ಇರೋದರಿಂದ ಜನರನ್ನು ದಾರಿ ತಪ್ಪಿಸಿ ಅವರ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಸೋಲಿನ ಭಯ ಶುರುವಾಗಿರುವುದು ಸ್ಪಷ್ಟ” ಎಂದು ತಿರುಗೇಟು ನೀಡಿದ್ದಾರೆ.