Begin typing your search above and press return to search.
    ಸತ್ಯ ಪರಿಶೀಲನೆಗಳು

    ಇಲ್ಲ, ಕರ್ನಾಟಕ ಸರ್ಕಾರ ಐದು ಚುನಾವಣಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಿಲ್ಲ

    IDTU - Karnataka
    8 Jun 2024 1:00 PM GMT
    ಇಲ್ಲ, ಕರ್ನಾಟಕ ಸರ್ಕಾರ ಐದು ಚುನಾವಣಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಿಲ್ಲ
    x

    ಸಾರಾಂಶ:

    ೨೦೨೩ ರಲ್ಲಿ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಐದು ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಆದರೆ, ಈ ಹೇಳಿಕೆಗಳು ತಪ್ಪು ಮತ್ತು ಸರ್ಕಾರವು ಈ ಐದು ಯೋಜನೆಗಳಲ್ಲಿ ಯಾವುದನ್ನೂ ಹಿಂತೆಗೆದುಕೊಂಡಿಲ್ಲ.

    ಹೇಳಿಕೆ:

    ಯೂಟ್ಯೂಬ್ ಮತ್ತು ಫೇಸ್‌ಬುಕ್‌ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ ಮತ್ತು ಅದರ ಶೀರ್ಷಿಕೆ ಮತ್ತು ಪಠ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಖಾತರಿ ಯೋಜನೆಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿಕೊಳ್ಳಲಾಗಿದೆ. ಕನ್ನಡದಲ್ಲಿ ಈ ಯೂಟ್ಯೂಬ್ ವೀಡಿಯೊದ ಶೀರ್ಷಿಕೆ ಹೀಗಿದೆ, “ಗೃಹ ಲಕ್ಷ್ಮಿ ೧೧ನೇ ಕಂತಿನ ೨೦೦೦ ಹಣ ಬರೋದಿಲ್ಲ! ಕಾಂಗ್ರೆಸ್ ೫ ಗ್ಯಾರಂಟಿಗಳು ಬಂದ್!” ಈ ಪಠ್ಯವು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದ ೫ ಯೋಜನೆಗಳನ್ನು ನಿಲ್ಲಿಸಲಾಗಿದೆ ಎಂದು ಸೂಚಿಸುತ್ತದೆ.

    ಜೂನ್ ೫, ೨೦೨೪ ರ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್‌.


    ಪುರಾವೆ:

    ೨೦೨೪ ರ ಚುನಾವಣೆಗೆ ಮುಂಚೆಯೇ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಜೂನ್ ೪, ೨೦೨೪ ರಂದು ಫಲಿತಾಂಶಗಳ ಘೋಷಣೆಯಾದ ನಂತರ ಈ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತದೆ ಎಂಬ ಹಲವಾರು ವದಂತಿಗಳು ಇದ್ದವು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ ೨೦೨೪ ರಲ್ಲಿ ಅಂತಹ ಆರೋಪಗಳನ್ನು ತಳ್ಳಿಹಾಕಿದ್ದರು. ಕಲಬುರ್ಗಿಯ ಅಫಜಲಪುರದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿಯವರು, "ಲೋಕಸಭಾ ಚುನಾವಣೆಯ ನಂತರ ಯೋಜನೆಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳುಗಳನ್ನು ಹರಡುವುದನ್ನು ನಿಲ್ಲಿಸುವಂತೆ ನಾನು ಬಿಜೆಪಿಯನ್ನು ಕೇಳಲು ಬಯಸುತ್ತೇನೆ," ಎಂದು ೨೦೨೪ ರ ಏಪ್ರಿಲ್ ೨೪ ರಂದು ಹೇಳಿಕೊಂಡಿರುವುದಾಗಿ ದಿ ಹಿಂದೂ ತನ್ನ ಸುದ್ದಿ ವರದಿಯೊಂದರಲ್ಲಿ ಉಲ್ಲೇಖಿಸಿದೆ.

    ಏಪ್ರಿಲ್ ೨೪, ೨೦೨೪ ರ ದಿ ಹಿಂದೂ ಸುದ್ದಿ ವರದಿಯ ಸ್ಕ್ರೀನ್‌ಶಾಟ್.


    ಗ್ಯಾರಂಟಿ ಸ್ಕೀಮ್‌ಗಳನ್ನು ನಿಲ್ಲಿಸಲಾಗುವುದು ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೋವನ್ನು ನಾವು ಸೂಕ್ಷ್ಮವಾಗಿ ಆಲಿಸಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಯೋಜನೆಗಳನ್ನು ಚುನಾವಣೆಯ ನಂತರ ಸ್ಥಗಿತಗೊಳಿಸಲಾಗುತ್ತದೆ ಎಂಬ ಹಲವಾರು ಊಹಾಪೋಹಗಳು ಇದ್ದವು ಎಂದು ಮಹಿಳೆಯೊಬ್ಬರು ಹೇಳುವುದನ್ನು ನಾವು ವೀಡಿಯೋದಲ್ಲಿ ಕೇಳಬಹುದು. ಆದರೆ, ವೀಡಿಯೋದ ಕೊನೆಯಲ್ಲಿ (ಸುಮಾರು ೪:೩೦ ನಿಮಿಷಗಳಲ್ಲಿ), ಈ ಐದು ಗ್ಯಾರಂಟಿ ಯೋಜನೆಗಳಲ್ಲಿ ಯಾವುದನ್ನೂ ಸ್ಥಗಿತಗೊಳಿಸಲಾಗಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಈ ವೀಡಿಯೋವಿಗೆ ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ಶೀರ್ಷಿಕೆ ಮತ್ತು ವೀಡಿಯೋದ ಪಠ್ಯಗಳನ್ನು ಕ್ಲಿಕ್‌ಬೈಟ್ ಆಗಿ ರಚಿಸಲಾಗಿದೆ. ತಪ್ಪಾದ ಮತ್ತು ಕುತೂಹಲವನ್ನು ಮೂಡಿಸುವಂತಹ ಶೀರ್ಷಿಕೆ ಹಾಗು ಪಠ್ಯವನ್ನು ಹಂಚಿಕೊಳ್ಳುವ ಮೂಲಕ ಜನರಿಂದ ಒಂದು ವೀಡಿಯೋ ಅಥವಾ ವರದಿಯ ಲಿಂಕ್ ತೆರೆಸಲು ಬಳಸುವ ವಿಧಾನಕ್ಕೆ ಕ್ಲಿಕ್ ಬೈಟ್ ಎಂದು ಕರೆಯುತ್ತಾರೆ.

    ಕರ್ನಾಟಕ ಸರ್ಕಾರದ ಸೇವಾಸಿಂಧು ಪೋರ್ಟಲ್ ಅನ್ನು ನೋಡಿದಾಗ, ಎಲ್ಲಾ ಯೋಜನೆಗಳು ಇನ್ನೂ ಜಾರಿಯಲ್ಲಿವೆ ಮತ್ತು ಈ ಫ್ಯಾಕ್ಟ್-ಚೆಕ್ ಬರೆಯುವ ಸಮಯದಲ್ಲಿ ಇವುಗಳಲ್ಲಿ ಯಾವುದನ್ನೂ ಹಿಂತೆಗೆದುಕೊಳ್ಳಲಾಗಿಲ್ಲ ಎಂದು ಕಂಡುಬಂದಿದೆ. ಈ ಯೋಜನೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯಾವುದೇ ಅಧಿಕೃತ ಮೂಲಗಳಿಂದ ಯಾವುದೇ ಹೇಳಿಕೆಗಳಿಲ್ಲ.

    ಕರ್ನಾಟಕ ಸರ್ಕಾರದ ಸೇವಾಸಿಂಧು ಪೋರ್ಟಲ್‌ನ ಸ್ಕ್ರೀನ್‌ಶಾಟ್.


    ಕರ್ನಾಟಕ ಮೂಲದ ಮಾಧ್ಯಮವಾದ ಉದಯವಾಣಿಯ ಸುದ್ದಿ ವರದಿಯು ಈ ಯೋಜನೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಕಂಡುಬಂದಿರುವ ಕಳವಳದ ಬಗ್ಗೆ ವರದಿ ಮಾಡಿದೆ. ಆದರೆ, ಈ ಯೋಜನೆಗಳಿಗೆ ಯಾವುದೇ ತಕ್ಷಣದ ಬದಲಾವಣೆಗಳಿಲ್ಲ ಮತ್ತು ಹಿಂಪಡೆಯಲಾಗುವುದಿಲ್ಲ ಎಂದು ಅದು ಹೇಳಿಕೊಂಡಿದೆ. ಲೋಕಸಭಾ ಚುನಾವಣೆಯ ನಂತರವೂ ಈ ಯೋಜನೆಗಳು ಮುಂದುವರಿಯಲಿವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಯನ್ನು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ತೀರ್ಪು:

    ಕರ್ನಾಟಕ ಸರ್ಕಾರದ ಐದು ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳುವ ವೀಡಿಯೋದ ವಿಶ್ಲೇಷಣೆಯು ಅದನ್ನು ಕ್ಲಿಕ್‌ಬೈಟ್‌ನಂತೆ ರಚಿಸಲಾಗಿದೆ ಎಂದು ಕಂಡುಬಂದಿದೆ. ಯಾವುದೇ ವಿಶ್ವಾಸಾರ್ಹ ಅಧಿಕೃತ ಮೂಲಗಳಿಂದ ಈ ಯೋಜನೆಗಳನ್ನು ಬದಲಾಯಿಸಲಾಗಿದೆ ಅಥವಾ ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆಗಳಿಲ್ಲ. ಆದ್ದರಿಂದ ವೀಡಿಯೋದ ಶೀರ್ಷಿಕೆ ಮತ್ತು ಪಠ್ಯವನ್ನು ಬಳಸಿಕೊಂಡು ಮಾಡಿದ ಹೇಳಿಕೆಗಳು ತಪ್ಪು ಮತ್ತು ಹೆಚ್ಚು ವೀಕ್ಷಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿವೆ ಎಂದು ಕಂಡುಕೊಂಡಿದ್ದೇವೆ.


    Claim Review :   No, the Karnataka government is not withdrawing the five guarantee schemes
    Claimed By :  Facebook User
    Fact Check :  False
    IDTU - Karnataka

    IDTU - Karnataka