ಇಲ್ಲ, ಈ ಚಿತ್ರವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಧ್ವಜ ಹಾರುತ್ತಿರುವುದನ್ನು ತೋರಿಸುವುದಿಲ್ಲ
ಸಾರಾಂಶ:
ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ರಾವಲ್‌ಕೋಟ್‌ನಲ್ಲಿ ಪಾಕ್ ಆಡಳಿತದ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಭಾರತದ ಧ್ವಜವನ್ನು ಹಾರಿಸುತ್ತಿರುವ ವೈರಲ್ ಚಿತ್ರವನ್ನು ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಪೋಷ್ಟ್ ಗಳು ಮತ್ತು ಹಲವಾರು ಸುದ್ದಿ ವರದಿಗಳನ್ನು ವಿಶ್ಲೇಷಿಸಿದಾಗ, ಚಿತ್ರವನ್ನು ಅಡ್ಡಲಾಗಿ ತಿರುಗಿಸಲಾಗಿದೆ ಮತ್ತು ತ್ರಿವರ್ಣ ಧ್ವಜದಂತೆ ಎಡಿಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ, ಇದು ಈ ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಪಿಒಕೆಯ ರಾವಲ್‌ಕೋಟ್‌ನಲ್ಲಿ ಪಾಕಿಸ್ತಾನ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಫೇಸ್‌ಬುಕ್, ಎಕ್ಸ್ (ಹಿಂದೆ ಟ್ವಿಟರ್), ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ, ಇದು ಪಿಒಕೆಯಲ್ಲಿ ಭಾರತದ ಧ್ವಜವನ್ನು ಹಾರಿಸಲಾಗಿದೆ ಎಂದು ಹೇಳುತ್ತದೆ.
ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಪಿಒಕೆ, ರಾವಲ್‌ಕೋಟ್‌ನಲ್ಲಿ ಜನಸಮೂಹದಿಂದ ಭಾರತದ ಧ್ವಜವನ್ನು ಹರಿಸುವುದನ್ನು ನೋಡಿ. ಈಗ ಹೆಚ್ಚು ಸಮಯ ಉಳಿದಿಲ್ಲ, ಶೀಘ್ರದಲ್ಲೇ ಭಾರತವು ಪಾಕಿಸ್ತಾನದಿಂದ ಪಿಒಕೆ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತದೆ" (ಅನುವಾದಿಸಲಾಗಿದೆ).
ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಯ ಸಮಯದಲ್ಲಿ ಪಿಒಕೆಯಲ್ಲಿ ಭಾರತದ ಧ್ವಜ ಹಾರುತ್ತಿದೆ ಎಂದು ಹೇಳುವ ಇದೇ ರೀತಿಯ ವರದಿಗಳು ಏಷ್ಯಾನೆಟ್ ಸುವರ್ಣ, ನ್ಯೂಸ್ ನೇಷನ್, ಪಂಜಾಬ್ ಕೇಸರಿ ಮತ್ತು ಗುಜರಾತಿ ಮಿಡ್-ಡೇ ನಂತಹ ಇತರೆ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ಪಿಒಕೆಯಲ್ಲಿ ಭಾರತೀಯ ಧ್ವಜ ಹಾರುತ್ತಿದೆ ಎಂದು ಹೇಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವಿಶ್ಲೇಷಿಸಿ ನೋಡಿದಾಗ, ವೈರಲ್ ಚಿತ್ರವನ್ನು ಅಡ್ಡಲಾಗಿ ತಿರುಗಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವೈರಲ್ ಪೋಷ್ಟ್ ಗಳಿಗೆ ಪ್ರತಿಕ್ರಿಯೆಯಾಗಿ ಮೂಲ ಚಿತ್ರವನ್ನು ಹಂಚಿಕೊಂಡ ಹಲವಾರು ಎಕ್ಸ್ ಬಳಕೆದಾರರು ಇದನ್ನು ಎತ್ತಿತೋರಿಸಿದ್ದಾರೆ.
ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಆಟೋರಿಕ್ಷಾವೊಂದರ ಹಿಂಭಾಗದಲ್ಲಿ ಪಾಕಿಸ್ತಾನ ಮೂಲದ ಆಟೋಮೊಬೈಲ್ ತಯಾರಿಕಾ ಕಂಪನಿಯ ಹೆಸರು "SAZGAR" ಎಂಬ ಪಠ್ಯವನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ಚಿತ್ರದಲ್ಲಿ ಎಲ್ಲಾ ಅಕ್ಷರಗಳು ತಲೆಕೆಳಗಾಗಿರುವುದು, ಚಿತ್ರವನ್ನು ಅಡ್ಡಲಾಗಿ ತಿರುಗಿಸಲಾಗಿದೆ ಎಂದು ಸಾಬೀತುಪಡಿಸುತ್ತದೆ.
ಈ ಎರಡು ವೈರಲ್ ಮತ್ತು ಮೂಲ ಚಿತ್ರಗಳ ಸ್ಕ್ರೀನ್‌ಶಾಟ್ ಗಳ ಹೋಲಿಕೆಯು ವೈರಲ್ ಚಿತ್ರವನ್ನು ತಿರುಗಿಸಲಾಗಿದೆ ಮತ್ತು ತ್ರಿವರ್ಣ ಧ್ವಜವನ್ನು ನಂತರ ಸೇರಿಸಲಾಗಿದೆ ಎಂದು ತೋರಿಸುತ್ತದೆ.
ಮತ್ತಷ್ಟು ರಿವರ್ಸ್ ಇಮೇಜ್ ಸರ್ಚ್ ನಮ್ಮನ್ನು ಜೆಕೆಏನ್ಎಸ್ಎಫ್ (ಜಮ್ಮು ಕಾಶ್ಮೀರ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ) ಎಂಬ ಫೇಸ್‌ಬುಕ್ ಪುಟಕ್ಕೆ ಕರೆದೊಯ್ಯಿತು, ಅದು "ಜಮ್ಮು ಕಾಶ್ಮೀರ ಜಂಟಿ ಅವಾಮಿ ಆಕ್ಷನ್ ಕಮಿಟಿಯ ಕರೆಯ ಮೇರೆಗೆ, ಪ್ರತಿಭಟನೆಯ ಪ್ರದರ್ಶನವನ್ನು ನಡೆಸಲಾಯಿತು!" (ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ಪೋಷ್ಟ್ ಅನ್ನು ಹಂಚಿಕೊಂಡಿದೆ. ಈ ಪೋಷ್ಟ್ ಅದೇ ರೀತಿಯ ವೈರಲ್ ಚಿತ್ರವನ್ನು ಹೊಂದಿದೆ ಆದರೆ ಭಾರತದ ರಾಷ್ಟ್ರಧ್ವಜವನ್ನು ತೋರಿಸಿಲ್ಲ.
ಯೂಟ್ಯೂಬ್‌ನಲ್ಲಿ ಹಲವಾರು ವೀಡಿಯೋಗಳು, ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಗಳು ಮತ್ತು ಪಾಕಿಸ್ತಾನಿ ಸುದ್ದಿ ವರದಿಯು ಇದೇ ರೀತಿಯ ಚಿತ್ರವನ್ನು ತೋರಿಸಿದೆ ಆದರೆ ಅದರಲ್ಲಿ ಭಾರತೀಯ ಧ್ವಜವಿಲ್ಲ.
ತೀರ್ಪು:
ವೈರಲ್ ಚಿತ್ರದ ವಿಶ್ಲೇಷಣೆಯು ಮೂಲ ಚಿತ್ರವನ್ನು ಅಡ್ಡಲಾಗಿ ತಿರುಗಿಸಲಾಗಿದೆ ಮತ್ತು ತ್ರಿವರ್ಣ ಧ್ವಜವನ್ನು ಸೇರಿಸಿ ಎಡಿಟಿಮಾಡಲಾಗಿದೆ ಎಂದು ತೋರಿಸುತ್ತದೆ. ಆದ್ದರಿಂದ ಈ ಹೇಳಿಕೆ ತಪ್ಪು.