- Home
- /
- ಸತ್ಯ ಪರಿಶೀಲನೆಗಳು
- /
- ಬಕ್ರೀದ್ ಹಬ್ಬದ ಸಂದರ್ಭ...
ಬಕ್ರೀದ್ ಹಬ್ಬದ ಸಂದರ್ಭ ಮುಸ್ಲಿಮರು ಕೋಣದ ತಲೆಯನ್ನು ದೇವಸ್ಥಾನದ ಆವರಣಕ್ಕೆ ಎಸೆದಿದ್ದಾರೆ ಎಂಬುವುದು ಸುಳ್ಳು
ಇಬ್ಬರು ಮುಸ್ಲಿಂ ಯುವಕರು ಕತ್ತರಿಸಿದ ಕೋಣದ ತಲೆಯನ್ನು ದೇವಸ್ಥಾನದ ಆವರಣದಲ್ಲಿ ಎಸೆದು ಹೋಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಂಚಿಕೊಳ್ಳಲಾಗಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಈ ಫೋಟೋ ಹಂಚಿಕೊಂಡಿರುವುದು ಕೋಮುದ್ವೇಷ ಉತ್ತೇಜಿಸುವಂತಿದೆ.
ಪೂಜಾರಿಯೊಬ್ಬರು ರಕ್ತ ಸಿಕ್ತವಾದ ಕೋಣದ ತಲೆಯನ್ನು ಎತ್ತಿಕೊಂಡಿರುವ ಫೋಟೋವನ್ನು ವಾಜಿದ್ ಖಾನ್ ಎಂಬ ಬಳಕೆದಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.ಈ ಫೋಟೋವನ್ನು ಹಂಚಿಕೊಂಡಿರುವ ಅನೇಕರು “ಕತ್ತರಿಸಿದ ಕೋಣದ ತಲೆಯನ್ನು ಇಬ್ಬರು ಮುಸ್ಲಿಮರು ದೇವಸ್ಥಾನದಲ್ಲಿ ಎಸೆದಿದ್ದರು. ಹಾಗಾಗಿ, ಪೂಜಾರಿಯೇ ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಹೀಗೆ ಮಾಡಬೇಕಾಯಿತು. ಈ ಇಸ್ಯಾಮಿಸ್ಟ್ ಅದನ್ನು ಹೇಗೆ ಗೇಲಿ ಮಾಡುತ್ತಿದ್ದಾನೆ ನೋಡಿ. ರಕ್ತಸಿಕ್ತ ಸೆಕ್ಯುಲರಿಸಂ” ಎಂದು ಬರೆದುಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್ : ವೈರಲ್ ಫೋಟೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಅದು ಅಸ್ಸಾಂನ ಧಾರ್ಮಿಕ ಆಚರಣೆಯೊಂದರ ಹಳೆಯ ಫೋಟೋ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 2017ರಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಅಸ್ಸಾಂನ ಬೆಲ್ಸೋರ್‌ನ ಬಿಲ್ಲೇಶ್ವರ ದುರ್ಗಾ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಯ ಭಾಗವಾಗಿ ಪ್ರಾಣಿ ಬಲಿಯಲ್ಲಿ ಭಾಗವಹಿಸಿದ ಭಕ್ತನ ಫೋಟೋ ಎಂದು ತಿಳಿದು ಬಂದಿದೆ.
ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವೈರಲ್ ಫೋಟೋವನ್ನು ಹುಡುಕಾಡಿದಾಗ “ನವಮಿ ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಹಿಂದೂ ದೇವತೆ ದುರ್ಗೆಯ ಬಿಲ್ಲೇಶ್ವರ ದೇವಸ್ಥಾನದಲ್ಲಿ ಕೋಣ ಬಲಿ ನೀಡಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಗೆಟ್ಟಿ ಇಮೇಜಸ್ ಫೋಟೋ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.
ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ “28 ಸೆಪ್ಟೆಂಬರ್ 2017 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ‘500 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಕೋಣ ಬಲಿಯು ನಿರಾತಂಕವಾಗಿ ಮುಂದುವರಿಯುತ್ತಿದೆ’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.
ನಾವು ನಡೆಸಿದ ಪರಿಶೀಲನೆಯಲ್ಲಿ, ವೈರಲ್ ಫೋಟೋ ಅಸ್ಸಾಂನ ಬೆಲ್ಸೋರ್‌ನ ಬಿಲ್ಲೇಶ್ವರ ದುರ್ಗಾ ದೇವಸ್ಥಾನದಲ್ಲಿ 2017ರಲ್ಲಿ ನವಮಿ ದುರ್ಗಾ ಪೂಜೆ ಉತ್ಸವದ ಸಮಯದಲ್ಲಿ ಕೋಣ ಬಲಿ ಕೊಟ್ಟಿರುವ ಫೋಟೋ ಎಂದು ತಿಳಿದು ಬಂದಿದೆ.