- Home
- /
- ಸತ್ಯ ಪರಿಶೀಲನೆಗಳು
- /
- ಹಳೆಯ ವೀಡಿಯೋವೊಂದನ್ನು...
ಹಳೆಯ ವೀಡಿಯೋವೊಂದನ್ನು ಕರ್ನಾಟಕ ಸರ್ಕಾರವು ಶಾಲೆಗಳಲ್ಲಿ ಕುರಾನ್ ಕಲಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕುರಾನ್ ಕಲಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕುರಾನ್‌ನ ಪಠಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಆದರೆ ಈ ವೀಡಿಯೋ ೨೦೨೩ರದ್ದು ಮತ್ತು ಹಾಸನದ ಖಾಸಗಿ ಶಾಲೆಯಲ್ಲಿ ಈದ್ ಅಲ್-ಅಧಾ (ಸಾಮಾನ್ಯವಾಗಿ ಬಕ್ರೀದ್ ಎಂದು ಕರೆಯಲಾಗುತ್ತದೆ) ಆಚರಣೆಯನ್ನು ತೋರಿಸುತ್ತದೆ. ಇದಲ್ಲದೆ, ರಾಜ್ಯ ಸರ್ಕಾರವು ಶಾಲೆಗಳಲ್ಲಿ ಕುರಾನ್ ಕಲಿಸುವುದರ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದು ವೈರಲ್ ಪೋಷ್ಟ್ ಗಳಲ್ಲಿನ ಆರೋಪಗಳನ್ನು ತಪ್ಪು ಎಂದು ಸಾಬೀತುಗೊಳಿಸುತ್ತದೆ.
ಹೇಳಿಕೆ:
ವಿದ್ಯಾರ್ಥಿಗಳು ಇಸ್ಲಾಮಿಕ್ ಪ್ರಾರ್ಥನೆಗಳನ್ನು ಪಠಿಸುತ್ತಿರುವುದನ್ನು ತೋರಿಸುವ ವೀಡಿಯೋವೊಂದನ್ನು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ರಾಜ್ಯದ ಶಾಲೆಗಳಲ್ಲಿ ಕುರಾನ್ ಕಲಿಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ ಎಂದು ಈ ವೀಡಿಯೋ ಹೊಂದಿರುವ ಪೋಷ್ಟ್ ನ ಶೀರ್ಷಿಕೆ ಆರೋಪಿಸಿದೆ. ಓರ್ವ ಎಕ್ಸ್ ಬಳಕೆದಾರರು ೨೦೨೪ ರ ಜುಲೈ ೧೦ ರಂದು ಹಿಂದಿ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹೀಗೆ ಹೇಳಿಕೊಂಡು ಪೋಷ್ಟ್ ಮಾಡಿದ್ದಾರೆ, "ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಲ್ಲಾ ಶಾಲೆಗಳಲ್ಲಿ ಕುರಾನ್ ಬೋಧನೆಯನ್ನು ಕಡ್ಡಾಯಗೊಳಿಸಿದೆ. ಉಚಿತ ಬಸ್ ಟಿಕೆಟ್ ಮತ್ತು ೨೦೦ ಯೂನಿಟ್ ವಿದ್ಯುತ್ ಗಾಗಿ ಹಿಂದೂಗಳು ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ. ಈಗ ಅನುಭವಿಸಿ...ಆದ್ದರಿಂದ ಸನಾತನಿಗಳೇ, ಉಚಿತ ಕೊಡುಗೆಗಳನ್ನು ತಿರಸ್ಕರಿಸಿ... ಇಲ್ಲವಾದರೆ ನೀವು ಕೂಡ ಮೆಲ್ಲನೆ ನಾಮಾವಶೇಷವಾಗುತ್ತೀರಿ." ಫೇಸ್‌ಬುಕ್‌ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಜುಲೈ ೧೦, ೨೦೨೪ ರಂದು ಎಕ್ಸ್ ನಲ್ಲಿ ಹಂಚಿಕೊಂಡ ವೀಡಿಯೋದ ಸ್ಕ್ರೀನ್‌ಶಾಟ್.
ಪುರಾವೆ:
ನಾವು ಈ ಪೋಷ್ಟ್ ನ ಹೇಳಿಕೆಯನ್ನು ವಿಶ್ಲೇಷಿಸಿದ್ದೇವೆ ಮತ್ತು ಶಾಲೆಗಳಲ್ಲಿ ಕುರಾನ್ ಬೋಧನೆಯನ್ನು ಕಡ್ಡಾಯಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಸೂಚಿಸುವ ಯಾವುದೇ ಅಧಿಕೃತ ಪ್ರಕಟಣೆಗಳಾಗಲಿ ಸುದ್ದಿ ವರದಿಗಳಾಗಲಿ ಕಂಡುಬಂದಿಲ್ಲ. ನಾವು ನಂತರ ವೈರಲ್ ವೀಡಿಯೋದ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಇದೇ ರೀತಿಯ ಹೇಳಿಕೆಗಳೊಂದಿಗೆ ಇದೇ ವೀಡಿಯೋ ವೈರಲ್ ಆಗಿತ್ತು ಎಂದು ಕಂಡುಕೊಂಡಿದ್ದೇವೆ.
ಇದೇ ಹೇಳಿಕೆಗಳೊಂದಿಗೆ ವೈರಲ್ ವೀಡಿಯೋವನ್ನು ಹೊಂದಿರುವ ಹಳೆಯ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
ಇದಲ್ಲದೆ, ವೈರಲ್ ವೀಡಿಯೋದಲ್ಲಿ ವೇದಿಕೆಯ ಮೇಲಿರುವ ಬ್ಯಾನರ್ ಅನ್ನು ನಾವು ಗಮನಿಸಿದ್ದೇವೆ. ಅದರ ಮೇಲೆ “ಜ್ಞಾನಸಾಗರ” ಮತ್ತು “ಬಕ್ರೀದ್ ಶುಭಾಶಯಗಳು” ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ವೀಡಿಯೋದಲ್ಲಿ ವೇದಿಕೆಯ ಮೇಲೆ ಕಂಡುಬಂದ ಬ್ಯಾನರ್‌ನ ಸ್ಕ್ರೀನ್‌ಶಾಟ.
ಇದರಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು "ಜ್ಞಾನಸಾಗರ್," "ಬಕ್ರೀದ್," "ವಿದ್ಯಾರ್ಥಿಗಳು," ಮತ್ತು "ಪ್ರಾರ್ಥನೆ" ಮೊದಲಾದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದ್ದೇವೆ. ಇದು ಜುಲೈ ೧, ೨೦೨೩ರ ನ್ಯೂಸ್ 9 ವರದಿಗೆ ನಮ್ಮನ್ನು ಕರೆದೊಯ್ಯಿತು.
ಜುಲೈ ೧, ೨೦೨೩ರ ನ್ಯೂಸ್ 9 ವರದಿಯ ಸ್ಕ್ರೀನ್‌ಶಾಟ್.
ವರದಿಯ ಪ್ರಕಾರ, ಜೂನ್ ೨೯, ೨೦೨೩ ರಂದು, ಬಕ್ರೀದ್ ಸಂದರ್ಭದಲ್ಲಿ, ರಾಜ್ಯದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಜ್ಞಾನಸಾಗರ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕುರಾನ್ ಪಠಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಉತ್ಸವದ ಬಗ್ಗೆ ವಿವರಿಸಿದರು, ನಂತರ ಪ್ರಾಂಶುಪಾಲರ ಸಂದೇಶ ನೀಡಿದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಶಾಲೆಯು ಇತರ ಹಬ್ಬಗಳಿಗೆ ಕೂಡ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಆದರೆ, ಕೆಲವು ಬಲಪಂಥೀಯ ಸಂಘಟನೆಗೆ ಸೇರಿದ ವ್ಯಕ್ತಿಗಳು ಈ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದರು ಮತ್ತು ವಿವರಣೆಗೆ ಒತ್ತಾಯಿಸಿ ಶಾಲೆಗೆ ಬಂದರು. ಶಾಲೆಯವರು ಕುರಾನ್ ಪಠಿಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿಲ್ಲ ಮತ್ತು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸಿ ವಿದ್ಯಾರ್ಥಿಗಳಿಗೆ ಜಾತ್ಯತೀತ ವಾತಾವರಣವನ್ನು ಒದಗಿಸುತ್ತೇವೆ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ ಎಂದು ಈ ವರದಿಯು ಹೇಳಿಕೊಂಡಿದೆ.
ಲೋಕಮತ್ ಟೈಮ್ಸ್ ನಂತಹ ಇತರ ಸುದ್ದಿ ಮಾಧ್ಯಮಗಳು ಕೂಡ ಈ ಘಟನೆಯನ್ನು ವರದಿ ಮಾಡಿವೆ. ಕರ್ನಾಟಕ ಸರ್ಕಾರವು ಶಾಲೆಗಳಲ್ಲಿ ಕುರಾನ್ ಕಡ್ಡಾಯವಾಗಿ ಕಲಿಸಲು ನಿರ್ಧರಿಸಿಲ್ಲ ಎಂದು ಈ ವರದಿಗಳು ಸ್ಪಷ್ಟಪಡಿಸುತ್ತವೆ ಮತ್ತು ೨೦೨೩ ರ ಬಕ್ರೀದ್ ಸಮಯದಲ್ಲಿ ಹಾಸನದ ಶಾಲೆಯೊಂದರಲ್ಲಿ ನಡೆದ ಘಟನೆಯನ್ನು ಈ ವೀಡಿಯೋ ತೋರಿಸುತ್ತದೆ.
ತೀರ್ಪು:
ವೀಡಿಯೋದ ವಿಶ್ಲೇಷಣೆಯು ರಾಜ್ಯದ ಹಾಸನ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದ ಬಕ್ರೀದ್ ಆಚರಣೆಯದ್ದು ಎಂದು ಬಹಿರಂಗಪಡಿಸುತ್ತದೆ. ಅಲ್ಲಿ ವಿದ್ಯಾರ್ಥಿಗಳು ಜೂನ್ ೨೯, ೨೦೨೩ ರಂದು ಕುರಾನ್ ಪಠಿಸುತ್ತಾ ಬಕ್ರೀದ್ ಆಚರಿಸಿದರು. ಇದಲ್ಲದೆ, ಕರ್ನಾಟಕ ಸರ್ಕಾರವು ರಾಜ್ಯದ ಶಾಲೆಗಳಲ್ಲಿ ಕುರಾನ್ ಕಲಿಸುವುದನ್ನು ಕಡ್ಡಾಯಗೊಳಿಸಿಲ್ಲ. ಹೀಗಾಗಿ, ಈ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಂಡುಬಂದ ಆರೋಪಗಳು ತಪ್ಪು.