- Home
- /
- ಸತ್ಯ ಪರಿಶೀಲನೆಗಳು
- /
- ಬುಲ್ಡೋಝರ್‌ನಿಂದ ಟೋಲ್...
ಬುಲ್ಡೋಝರ್‌ನಿಂದ ಟೋಲ್ ಪ್ಲಾಝಾ ಧ್ವಂಸಗೈದ ವ್ಯಕ್ತಿ ಮುಸ್ಲಿಂ ಎಂಬುವುದು ಸುಳ್ಳು
ಉತ್ತರ ಪ್ರದೇಶದ ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಟೋಲ್ ಕಟ್ಟುವಂತೆ ಕೇಳಿದ್ದಕ್ಕೆ ಟೋಲ್ ಪ್ಲಾಝಾವನ್ನು ಜೆಸಿಬಿ ಮೂಲಕ ಧ್ವಂಸಗೈದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತ ವಿಡಿಯೋ, ಪೋಟೋಗಳನ್ನು ಹಂಚಿಕೊಂಡಿರುವ ಅನೇಕ ಜನರು ಬಂಧಿತ ಆರೋಪಿ ಮುಸ್ಲಿಂ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಘಟನೆಯ ವಿಡಿಯೋ ಮತ್ತು ಆರೋಪಿಯನ್ನು ಪೊಲೀಸರು ಬಂಧಿಸಿರುವ ಫೋಟೋವನ್ನು ಹಂಚಿಕೊಂಡಿದ್ದ ಟೈಮ್ಸ್ ನೌ ವಾಹಿನಿಯ ನಿರೂಪಕ ಪ್ರಾಣೇಶ್ ಕುಮಾರ್ ರಾಯ್ ” ಮೊಹಮ್ಮದ್ ಸಾಜಿದ್ ಎಂಬ ಬುಲ್ಡೋಝರ್ ಚಾಲಕನೊಂದಿಗೆ ಟೋಲ್ ಕಟ್ಟುವಂತೆ ಕೇಳಿದ್ದಕ್ಕೆ, ಬುಲ್ಡೋಝರ್ ಮೂಲಕ ಟೋಲ್ ಪ್ಲಾಝಾವನ್ನು ಧ್ವಂಸಗೈದಿದ್ದಾನೆ. ಯುಪಿ ಪೊಲೀಸರು ಈತನನ್ನು ಜೈಲಿಗಟ್ಟಿ” ಎಂದು ಬರೆದುಕೊಂಡಿದ್ದರು. ಬಳಿಕ ಅವರು ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಎಸ್‌ಕೆ ಚಕ್ರವರ್ತಿ ಎಂಬ ಮತ್ತೋರ್ವ ಎಕ್ಸ್ ಬಳಕೆದಾರ ಕೂಡ ವಿಡಿಯೋ ಹಂಚಿಕೊಂಡು ಮೊಹಮ್ಮದ್ ಸಾಜಿದ್‌ನ ದಾದಾಗಿರಿ. ಎಂ.ಡಿ ಸಾಜಿದ್ ಅಲೀ ಎಂಬಾತ ಟೋಲ್ ಕಟ್ಟುವಂತೆ ಕೇಳಿದ್ದಕ್ಕೆ ಟೋಲ್ ಪ್ಲಾಝಾ ಮೇಲೆ ಬುಲ್ಡೋಝರ್ ಹತ್ತಿಸಿದ್ದಾನೆ. ಗಂಟೆಯೊಳಗೆ ಆತನ ಬುಲ್ಡೋಝರ್ ವಶಕ್ಕೆ ಪಡೆಯಲಾಗಿದೆ. ಸಾಜಿದ್ ಅಲೀ ವಿರುದ್ದ ಐಪಿಸಿ ಸೆಕ್ಷನ್ 307ರ ಅಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಬರೆದುಕೊಂಡಿದ್ದಾರೆ.
ಇನ್ನೂ ಅನೇಕ ಎಕ್ಸ್ ಬಳಕೆದಾರರು ಘಟನೆಯ ವಿಡಿಯೋ ಹಂಚಿಕೊಂಡು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಬುಲ್ಡೋಝರ್ ಕಾರ್ಯಾಚರಣೆಯನ್ನು ನೆನಪಿಸಿದ್ದಾರೆ. ಆರೋಪಿಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಧ್ವಂಸಗೈಯ್ಯುವ ಸರ್ಕಾರ, ಟೋಲ್ ಪ್ಲಾಝಾ ಮೇಲೆ ಬುಲ್ಡೋಝರ್ ಹತ್ತಿಸಿದ ವ್ಯಕ್ತಿಯ ಮನೆಯನ್ನೂ ಕೂಡ ಬುಲ್ಡೋಝರ್‌ನಿಂದ ಧ್ವಂಸಗೈಯ್ಯಲಿದೆ ಎಂದು ಪರೋಕ್ಷವಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಆರೋಪಿ ಮುಸ್ಲಿಂ ಎಂದು ಸುದ್ದಿ ಹಬ್ಬಿದ್ದು ಇವರ ಖುಷಿಗೆ ಕಾರಣವಾಗಿದೆ.
ಫ್ಯಾಕ್ಟ್ ಚೆಕ್ : ವರದಿಗಳ ಪ್ರಕಾರ, ಟೋಲ್ ಪ್ಲಾಝಾ ಮೇಲೆ ಬುಲ್ಡೋಝರ್ ಹತ್ತಿಸಿದ ವ್ಯಕ್ತಿಯ ಹೆಸರು ಧೀರಜ್ ಎಂದು ತಿಳಿದು ಬಂದಿದೆ. ಆದ್ದರಿಂದ ಆತ ಮುಸ್ಲಿಂ ಅಲ್ಲ ಎಂಬುವುದು ಖಚಿತ.
ಘಟನೆಯ ಕುರಿತು ಜೂನ್ 11ರಂದು ಡೆಕ್ಕನ್ ಹೆರಾಲ್ಡ್ ವೆಬ್‌ಸೈಟ್ ಪ್ರಕಟಿಸಿರುವ ವರದಿಯಲ್ಲಿ ಆರೋಪಿಯ ಹೆಸರು ಧೀರಜ್ ಎಂದು ಉಲ್ಲೇಖಿಸಿದೆ.
ಇಂದು (ಜೂನ್ 12) ಎಕ್ಸ್ ಮೂಲಕ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶದ ಹಾಪುರ್ ಎಸ್‌ಪಿ ಅಭಿಶೇಕ್ ವರ್ಮಾ, “ನಿನ್ನೆ ನಡೆದ ಪಿಲಾಖುವಾ ಟೋಲ್ ಪ್ಲಾಝಾ ಘಟನೆಯ ಆರೋಪಿ ಧೀರಜ್‌ನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಚುರುಕುಗೊಳಿಸಲಾಗಿದೆ. ಆರೋಪಿ ಅರ್ಹ ಶಿಕ್ಷೆಯನ್ನು ಪಡೆಯಲಿದ್ದಾನೆ” ಎಂದು ತಿಳಿಸಿದ್ದಾರೆ.
ಎಸ್‌ಪಿ ಅಭಿಶೇಕ್ ವರ್ಮಾ ಪ್ರಕಾರ, ಫ್ಯಾಕ್ಟರಿಯೊಂದರ ಕೆಲಸಕ್ಕಾಗಿ ಆರೋಪಿ ಧೀರಜ್ ತನ್ನ ಬುಲ್ಡೋಝರ್ ತೆಗೆದುಕೊಂಡು ಹೋಗಿದ್ದ. ಆತ ಪರವಾನಿಗೆ ಹೊಂದಿರಲಿಲ್ಲ. ಫ್ಯಾಕ್ಟರಿ ಮಾಲೀಕನ ಹೆಸರು ಸಾಜಿದ್. ಬುಲ್ಡೋಝರ್ ಚಾಲಕನ ಹೆಸರು ಧೀರಜ್. ಟೋಲ್ ಪ್ಲಾಝಾ ಧ್ವಂಸಗೈದ ಆರೋಪಿಯ ಹೆಸರು ಧೀರಜ್ ಎಂದಾಗಿದೆ.
ಜೂನ್ 11, 2024ರ ಮಂಗಳವಾರ ಬೆಳಿಗ್ಗೆ ಉತ್ತರ ಪ್ರದೇಶದ ಹಾಪುರ್ ಸಮೀಪದ ಪಿಲಾಖುವಾದ ಚರಾಸಿ ಟೋಲ್ ಪ್ಲಾಝಾದ ಮೇಲೆ ಬುಲ್ಡೋಝರ್‌ನಿಂದ ದಾಳಿ ಮಾಡಲಾಗಿದೆ. ಟೋಲ್ ಸಿಬ್ಬಂದಿ ಹಣ ಕೇಳಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ಬುಲ್ಡೋಝರ್ ಚಾಲಕ ಧೀರಜ್ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಗಮನಿಸಿ : ಅಪರಾಧಿಯನ್ನು ಧರ್ಮದ ಆಧಾರದಲ್ಲಿ ಗುರುತಿಸುವುದು ತಪ್ಪು. ಬುಲ್ಡೋಝರ್ ದಾಳಿಯ ಘಟನೆಗೆ ಕೋಮು ಬಣ್ಣ ಬಳಿದು ಒಂದು ಸಮುದಾಯವನ್ನು ಗುರಿಯಾಗಿಸುತ್ತಿರುವ ಹಿನ್ನೆಲೆ, ನಾವು ಈ ಸುದ್ದಿಯಲ್ಲಿ ಸತ್ಯಾಸತ್ಯತೆ ತಿಳಿಸುವ ಪ್ರಯತ್ನ ಮಾಡಿದ್ದೇವೆ.