- Home
- /
- ಸತ್ಯ ಪರಿಶೀಲನೆಗಳು
- /
- ಯುವಕನನ್ನು...
ಯುವಕನನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿರುವ ಕುರಿತು ಇತ್ತೀಚಿನ ಯಾವುದೇ ವರದಿಗಳಿಲ್ಲ
ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಯುವಕನೊಬ್ಬನನ್ನು ಸಾರ್ವಜನಿಕವಾಗಿ ನೇಣಿಗೇರಿಸಿರುವುದನ್ನು ನೋಡಬಹುದು.
ವಿಡಿಯೋ ಹಂಚಿಕೊಂಡಿರುವ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ರಾಜಸ್ಥಾನದಲ್ಲಿ ನಾರಾಯಣ ದಾಸ್ ಎಂಬ ದಲಿತ ಹುಡುಗನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ಮೇಲ್ಜಾತಿಯ ದೇವಸ್ಥಾನದಲ್ಲಿನ ಪ್ರತಿಮೆಯನ್ನು ಅವಮಾನಿಸಿದ ಕಾರಣ ಯುವಕನನ್ನು ನೇಣಿಗೆ ಹಾಕಲಾಗಿದೆ ಎಂದಿದ್ದಾರೆ.
ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕವಿತಾ ಯಾದವ್ ಎಂಬ ಬಳಕೆದಾರರು “ಹಿಂದೂ ತಾಲಿಬಾನ್ ಉಗ್ರಗಾಮಿ ಮನುವಾದಿಗಳು ದಲಿತ ಹುಡುಗನನ್ನು ನೇಣಿಗೇರಿಸಿದ್ದಾರೆ ಮತ್ತು ಲೈವ್ ವಿಡಿಯೋ ಮೂಲಕ ತೋರಿಸಿದ್ದಾರೆ. ಈ ಯುವಕ ಮೇಲ್ಜಾತಿಯ ದೇವಸ್ಥಾನದಲ್ಲಿನ ಪ್ರತಿಮೆಯನ್ನು ಅವಮಾನಿಸಿದ್ದಾನೆ ಎಂದು ಹೇಳಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಆರೋಪಗಳನ್ನು ಮಾಡಿ ಇನ್ನೂ ಅನೇಕ ಎಕ್ಸ್ ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದಾರೆ.
ಆದರೆ, ಕೆಲ ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ಬಿಜೆಪಿ ಕಾರ್ಯಕರ್ತನನ್ನು ನೇಣಿಗೆ ಹಾಕಲಾಗಿದೆ ಎಂದಿದ್ದಾರೆ.
ಮಧುಗಿರಿ ಮೋದಿ ಮೋದಿ ಯೋಗಿ ಭಕ್ತ ಎಂಬ ಎಕ್ಸ್ ಖಾತೆಯಲ್ಲಿ “ತಾಲಿಬಾನಿ ಐಸಿಸ್ ಶೈಲಿಯಲ್ಲಿ ಬಹಿರಂಗವಾಗಿ ಹಿಂದೂ ಬಿಜೆಪಿ ಕಾರ್ಯಕರ್ತನನ್ನು ನೇಣಿಗೆ ಹಾಕಿದ ಘಟನೆ. ಮನೇಲಿ ಕೂತಿರಿ, ಇಲ್ಲಿ ಸಹ ಅದೇ ಚಿತ್ರ ಪುನರಾವರ್ತನೆ ಆಗುತ್ತದೆ. ಜೂನ್ 4ರ ನಂತರ ನೋಡುತ್ತಿರಿ ಓಟಕ್ಕೆ ಮೈದಾನ ತಯಾರಾಗಿದ್ದನ್ನು” ಎಂದು ಬರೆದುಕೊಂಡು ವಿಡಿಯೋ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಗೂಗಲ್ ಸರ್ಚ್ ಮಾಡಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ ದೇಶದಲ್ಲಿ ಅಥವಾ ವಿದೇಶಗಳಲ್ಲಿ ಯುವಕನನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿರುವ ಕುರಿತು ಯಾವುದೇ ಮಾಧ್ಯಮ ವರದಿಗಳು ನಮಗೆ ದೊರೆತಿಲ್ಲ.
ವಿಡಿಯೋ ಹಂಚಿಕೊಂಡಿರುವ ಅನೇಕ ಎಕ್ಸ್ ಬಳಕೆದಾರರು ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಆದರೆ, ರಾಜಸ್ಥಾನ ಪೊಲೀಸರು ಅಂತಹ ಘಟನೆ ರಾಜ್ಯದಲ್ಲಿ ನಡೆದಿಲ್ಲ ಎಂದು ಖಚಿತಪಡಿಸಿದ್ದಾರೆ.
ಏಪ್ರಿಲ್ 28ರಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ರಾಜಸ್ಥಾನ ಪೊಲೀಸರು, “ಈ ವಿಡಿಯೋ ಸಂಪೂರ್ಣ ನಕಲಿ, ಅಂತಹ ಯಾವುದೇ ಘಟನೆ ಇಲ್ಲಿ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಇಂತಹ ವಿಡಿಯೋ ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ನಮ್ಮ ಪರಿಶೀಲನೆಯಲ್ಲಿ ಭಾರತ ಅಥವಾ ಹೊರ ದೇಶಗಳಲ್ಲಿ ಎಲ್ಲೂ ಯುವಕನನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿದ ಮಾಹಿತಿ ದೊರೆತಿಲ್ಲ. ರಾಜಸ್ಥಾನಲ್ಲಿ ಅಂತಹ ಘಟನೆ ನಡೆದಿಲ್ಲ ಎಂದು ಪೊಲೀಸರೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಈ ವಿಡಿಯೋ ಏನು? ಎಲ್ಲಿ ನಡೆದಿದೆ ಎಂಬುವುದ ಖಚಿತ ಮಾಹಿತಿ ಲಭ್ಯವಾಗಬೇಕಿದೆ.