Begin typing your search above and press return to search.
    ಸತ್ಯ ಪರಿಶೀಲನೆಗಳು

    ಉತ್ತರ ಪ್ರದೇಶದಲ್ಲಿ ಶಾಲೆಯ ಪ್ರಾಂಶುಪಾಲರನ್ನು ತನ್ನ ಕಛೇರಿಯಿಂದ ಬಲವಂತವಾಗಿ ಹೊರಹಾಕಿದ ವೀಡಿಯೋವನ್ನು ಕರ್ನಾಟಕದ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

    IDTU - Karnataka
    12 July 2024 4:20 AM GMT
    ಉತ್ತರ ಪ್ರದೇಶದಲ್ಲಿ ಶಾಲೆಯ ಪ್ರಾಂಶುಪಾಲರನ್ನು ತನ್ನ ಕಛೇರಿಯಿಂದ ಬಲವಂತವಾಗಿ ಹೊರಹಾಕಿದ ವೀಡಿಯೋವನ್ನು ಕರ್ನಾಟಕದ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ಸಾಮಾಜಿಕ ಮಾಧ್ಯಮ ಬಳಕೆದಾರರು ಶಾಲಾ ಸಿಬ್ಬಂದಿ ಪ್ರಾಂಶುಪಾಲರೊಂದಿಗೆ ಕೆಟ್ಟದಾಗಿ ನಡೆದುಕೊಂಡು ಅವರ ಕಚೇರಿಯಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದು ಹೇಳಿಕೊಂಡು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಂಡುಬಂದ ಪಠ್ಯವು ಈ ಘಟನೆಯು ಕರ್ನಾಟಕದ ಸರ್ಕಾರಿ ಶಾಲೆಯದ್ದಾಗಿದೆ ಎಂದು ಹೇಳಿಕೊಂಡಿದ್ದು, ಅಲ್ಲಿ ಕ್ರಿಶ್ಚಿಯನ್ ಸಮುದಾಯದ ಶಾಲಾ ಸಿಬ್ಬಂದಿ ಹಿಂದೂ ಸಮುದಾಯದ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡಿದೆ. ಆದರೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಕರ್ನಾಟಕದಲ್ಲಿ ನಡೆದ ಘಟನೆ ಎಂದು ಕೋಮು ಕೋನದಿಂದ ಹಂಚಿಕೊಂಡ ವೀಡಿಯೋ ಪೋಷ್ಟ್ ತಪ್ಪು.

    ಹೇಳಿಕೆ:

    ಸಾಮಾಜಿಕ ಮಾಧ್ಯಮ ಬಳಕೆದಾರರು ಕರ್ನಾಟಕದ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ ಎಂದು ಸೂಚಿಸುವ ಪಠ್ಯವನ್ನು ಹೊಂದಿರುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಕ್ರಿಶ್ಚಿಯನ್ ಸಿಬ್ಬಂದಿ ಹಿಂದೂ ಪ್ರಾಂಶುಪಾಲರನ್ನು ಆಕೆಯ ಕಚೇರಿಯಿಂದ ಹೊರಗೆ ಎಳೆದಿದ್ದಾರೆ ಎಂದು ಹೇಳಿಕೊಳ್ಳಲಾಗಿದೆ. ಇನ್ಸ್ಟಾಗ್ರಾಮ್ ಬಳಕೆದಾರರು ಜುಲೈ ೭, ೨೦೨೪ ರಂದು ಈ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ವೀಡಿಯೋದ ಮೇಲಿನ ಹಿಂದಿ ಪಠ್ಯವು ಹೀಗಿದೆ: "ಕರ್ನಾಟಕದ ಸರ್ಕಾರಿ ಶಾಲೆಯೊಂದರಲ್ಲಿ ಹಿಂದೂ ಮಹಿಳೆಯೊಬ್ಬರು ಪ್ರಾಂಶುಪಾಲರಾದಾಗ, ಅಲ್ಲಿನ ಸಿಬ್ಬಂದಿ, ಅವರೆಲ್ಲರೂ ಕ್ರಿಶ್ಚಿಯನ್ನರು, ಅವಳನ್ನು ಅನುಮತಿಸುವುದಿಲ್ಲ. ಕುರ್ಚಿಯ ಮೇಲೆ ಕುಳಿತುಕೊಳ್ಳಿ, ಮತ್ತು ಮೊದಲು ಪ್ರಾಂಶುಪಾಲರಾಗಿದ್ದ ಕ್ರಿಶ್ಚಿಯನ್ ಮಹಿಳೆ ಅವಳನ್ನು ಮತ್ತೆ ಕುರ್ಚಿಯ ಮೇಲೆ ಕೂರಿಸುತ್ತಾಳೆ, ನೀವೆಲ್ಲರೂ ಒಬ್ಬೊಬ್ಬರಾಗಿ ಮುಗಿಸುತ್ತೀರಿ (ಅನುವಾದಿಸಲಾಗಿದೆ)." ಪೋಷ್ಟ್ ೪೮೩ ಇಷ್ಟಗಳು ಮತ್ತು ೫೧ ಕಾಮೆಂಟ್‌ಗಳನ್ನು ಗಳಿಸಿದೆ.

    ಜುಲೈ ೭, ೨೦೨೪ ರಂದು ಕೋಮು ನಿರೂಪಣೆಗಳೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಷ್ಟ್ ಮಾಡಿದ ವೀಡಿಯೋದ ಸ್ಕ್ರೀನ್‌ಶಾಟ್.


    ಪುರಾವೆ:

    ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಅದು ಆನ್‌ಲೈನ್‌ನಲ್ಲಿ ವಿಭಿನ್ನ ಹೇಳಿಕೆಗಳೊಂದಿಗೆ ವೈರಲ್ ಆಗಿರುವುದನ್ನು ಕಂಡುಕೊಂಡಿದ್ದೇವೆ. ಇಂತಹ ಒಂದು ಪೋಷ್ಟ್ ಅನ್ನು ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಜುಲೈ ೬, ೨೦೨೪ ರಂದು ಹಂಚಿಕೊಂಡಿದ್ದಾರೆ. ಇದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಶಾಲೆಯೊಂದರಲ್ಲಿ ಪ್ರಾಂಶುಪಾಲರ ಹುದ್ದೆಗಾಗಿ ನಡೆದ ಜಗಳವನ್ನು ತೋರಿಸುತ್ತದೆ ಎಂದು ಸೂಚಿಸುತ್ತದೆ. ಎಕ್ಸ್ ನಲ್ಲಿನ ಇನ್ನೊಬ್ಬ ಬಳಕೆದಾರರು ಜುಲೈ ೭, ೨೦೨೪ ರಂದು ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದು ಪ್ರಯಾಗ್‌ರಾಜ್‌ನ ಶಾಲೆಯೊಂದರ ಶಿಕ್ಷಕರ ನಡುವೆ ನಡೆದ "ಗ್ಯಾಂಗ್ ಫೈಟ್" ಅನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದೆ.

    ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಘಟನೆ ಎಂದು ಹೇಳಿಕೊಂಡು ವೀಡಿಯೋ ಹಂಚಿಕೊಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್.


    ಇದರಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು "ಪ್ರಯಾಗ್‌ರಾಜ್‌," "ಪ್ರಾಂಶುಪಾಲರು," "ಶಾಲೆ," ಮತ್ತು "ಎಳೆದೊಯ್ಯುವುದು" ಮೊದಲಾದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದ್ದೇವೆ. ಇದು ಜುಲೈ ೬, ೨೦೨೪ರ ಇಂಡಿಯಾ ಟುಡೇ ವರದಿಗೆ ನಮ್ಮನ್ನು ಕರೆದೊಯ್ಯಿತು.

    ಜುಲೈ ೬, ೨೦೨೪ ರ ಇಂಡಿಯಾ ಟುಡೇ ವರದಿಯ ಸ್ಕ್ರೀನ್‌ಶಾಟ್.


    ಈ ವರದಿಯ ಪ್ರಕಾರ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಬಿಷಪ್ ಜಾನ್ಸನ್ ಗರ್ಲ್ಸ್ ಸ್ಕೂಲ್‌ನಲ್ಲಿ ಘಟನೆ ಸಂಭವಿಸಿದೆ. ಪಾರುಲ್ ಸೊಲೊಮನ್ ಎಂಬ ಪ್ರಾಂಶುಪಾಲರನ್ನು ಶಾಲಾ ಸಿಬ್ಬಂದಿ, ಫೆಬ್ರವರಿ ೧೧, ೨೦೨೪ ರಂದು ಸಂಭವಿಸಿದ ಉತ್ತರ ಪ್ರದೇಶ್ ಪಬ್ಲಿಕ್ ಸರ್ವಿಸ್ ಕಮಿಷನ್ (UPPSC) ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಹಿನ್ನಲೆಯಲ್ಲಿ ಅವರನ್ನು ವಜಾಗೊಳಿಸಿದ ನಂತರ ಬಲವಂತವಾಗಿ ಅವರ ಕಚೇರಿಯಿಂದ ತೆಗೆದುಹಾಕಿದ್ದಾರೆ. ಕೆಲವು ಶಾಲಾ ಸಿಬ್ಬಂದಿ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಪಾರುಲ್ ಸೊಲೊಮನ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಕೂಡ ವರದಿಯು ಹೇಳಿಕೊಂಡಿದೆ.

    ಮಿಂಟ್, ಎನ್‌ಡಿಟಿವಿ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ನಂತಹ ಇತರ ಸುದ್ದಿ ಮಾಧ್ಯಮಗಳು ಕೂಡ ಈ ಘಟನೆಯನ್ನು ವರದಿ ಮಾಡಿವೆ. ಕರ್ನಾಟಕದಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ ಎಂದು ತಪ್ಪಾದ ಕೋಮು ಕೋನದೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ ಎಂದು ಇದು ಸ್ಪಷ್ಟಪಡಿಸುತ್ತದೆ.

    ತೀರ್ಪು:

    ವೀಡಿಯೋದ ವಿಶ್ಲೇಷಣೆಯು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಘಟನೆಯಿದು ಎಂದು ಬಹಿರಂಗಪಡಿಸುತ್ತದೆ. ಪರೀಕ್ಷಾ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಶಾಲಾ ಅಧಿಕಾರಿಗಳು ಪ್ರಾಂಶುಪಾಲರನ್ನು ಬಲವಂತವಾಗಿ ತೆಗೆದು ಹಾಕಲು ಪ್ರಯತ್ನಿಸುತ್ತಿರುವ ದೃಶ್ಯಗಳನ್ನು ಈ ವೀಡಿಯೋ ತೋರಿಸುತ್ತದೆ. ಆದ್ದರಿಂದ, ಈ ಘಟನೆ ಕರ್ನಾಟಕದಲ್ಲಿ ನಡೆದದ್ದು ಮತ್ತು ಇದು ಕೋಮು ಘಟನೆ ಎಂದು ಆನ್‌ಲೈನ್‌ನಲ್ಲಿ ಮಾಡಿದ ಆರೋಪಗಳು ತಪ್ಪು.

    Claim Review :   Video of a School Principal forced out of her office in Uttar Pradesh falsely shared as a communal incident from Karnataka
    Claimed By :  Instagram User
    Fact Check :  False
    IDTU - Karnataka

    IDTU - Karnataka