- Home
- /
- ಸತ್ಯ ಪರಿಶೀಲನೆಗಳು
- /
- ರಸ್ತೆ ಮಧ್ಯೆ ಯುವತಿಯನ್ನು...
ರಸ್ತೆ ಮಧ್ಯೆ ಯುವತಿಯನ್ನು ಗುಂಡಿಕ್ಕಿ ಕೊಂದಿರುವ ವಿಡಿಯೋ ಮಣಿಪುರದ್ದಲ್ಲ
ಸೇನಾ ಸಿಬ್ಬಂದಿಯಂತೆ ವಸ್ತ್ರ ಧರಿಸಿರುವ ವ್ಯಕ್ತಿಯೊಬ್ಬ ಮತ್ತು ಇತರರು ರಸ್ತೆ ಮಧ್ಯೆ ಯುವತಿಯೊಬ್ಬಳನ್ನು ಹಿಂಸಿಸಿ ಗುಂಡಿಕ್ಕಿ ಕೊಂದಿರುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಹರಿದಾಡುತ್ತಿದೆ.
ಕೆಲವರು ಇತ್ತೀಚೆಗೆ ಮಣಿಪುರದಲ್ಲಿ ಈ ಘಟನೆ ನಡೆದಿದೆ ಕುಕಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ಮೈತೇಯಿ ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎಂದಿದ್ದಾರೆ.
ಇದೇ ವಿಡಿಯೋ ಮುಂದಿಟ್ಟುಕೊಂಡು, ಮಣಿಪುರದಲ್ಲಿ ಹಿಂಸಾಚಾರದ ವೇಳೆ ಈ ಘಟನೆ ನಡೆದಿದೆ ಎಂದು ಅಸ್ಸಾಂನ ಪತ್ರಿಕೆ ‘ಅಮರ್ ಅಸೋಮ್’ ಜೂನ್ 19, 2023 ರಂದು ಮೊದಲ ಪುಟದಲ್ಲಿ ವರದಿ ಪ್ರಕಟಿಸಿತ್ತು.
ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ಸ್ಕ್ರೀನ್ ಶಾಟ್ ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದ್ದೇವೆ. ಈ ವೇಳೆ ಡಿಸೆಂಬರ್ 2022 ರಲ್ಲಿ ಘಟನೆಯ ಕುರಿತು ಬರ್ಮೀಸ್ ಸುದ್ದಿ ಸಂಸ್ಥೆಗಳು ವರದಿ ಮಾಡಿರುವುದು ಕಂಡು ಬಂದಿದೆ.
ಸುದ್ದಿ ವಾಹಿನಿ ಇಲೆವೆನ್ ಮ್ಯಾನ್ಮಾರ್ ಡಿಸೆಂಬರ್ 3, 2022ರಂದು ಈ ಘಟನೆಯ ಕುರಿತು ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಕಾರ, “ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಮಾಹಿತಿದಾರೆ ಎಂದು ಒಪ್ಪಿಕೊಳ್ಳಲು ಒತ್ತಾಯಿಸಿ ಯುವತಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ” ಎಂದು ಹೇಳಲಾಗಿದೆ.
ಡಿಸೆಂಬರ್ 6, 2022ರಂದು ಈ ಘಟನೆಯ ಕುರಿತು ವರದಿ ಮಾಡಿದ್ದ ಮ್ಯಾನ್ಮಾರ್‌ನ ವೆಬ್‌ಸೈಟ್ myanmar-now.org ಸಾಗಯಿಂಗ್ ಪ್ರದೇಶದ ತಮು ಟೌನ್‌ಶಿಪ್‌ನ ನಿವಾಸಿ 24 ವರ್ಷದ ಆಯೆ ಮರ್ ತುನ್ ಎಂಬಾಕೆಯನ್ನು ಸೇನಾ ಮಾಹಿತಿದಾರಳು ಎಂವ ಶಂಕೆಯ ಮೇಲೆ ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಸದಸ್ಯರು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಅನೇಕ ಪಿಡಿಎಫ್ ಸದಸ್ಯರನ್ನು ಬಂಧಿಸಲಾಗಿದೆ. ಪಿಡಿಎಫ್ ಸದಸ್ಯರು ಯುವತಿಯನ್ನು ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡು ಬಂದರೆ ಅವರಿಗೆ ಕಠಿ ಶಿಕ್ಷೆ ವಿಧಿಸುವುದಾಗಿ ಸರ್ಕಾರ ಹೇಳಿದೆ ಎಂದಿತ್ತು.
ನಾವು ನಡೆಸಿದ ಪರಿಶೀಲನೆಯಲ್ಲಿ ಯುವತಿಯ ಹತ್ಯೆ ವಿಡಿಯೋ 2022ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಘಟನೆಯದ್ದು ಎಂದು ತಿಳಿದು ಬಂದಿದೆ. ಮಿಲಿಟರಿ ಮಾಹಿತಿದಾರಳು ಎಂಬ ಶಂಕೆ ಮೇಲೆ ಅಲ್ಲಿನ ಬಂಡುಕೋರರ ಗುಂಪು ಪಿಡಿಎಫ್ ಯುವತಿಯನ್ನು ಹತ್ಯೆ ಮಾಡಿದೆ. ಅಲ್ಲದೆ, ಇದು ಮಣಿಪುರದಲ್ಲಿ ನಡೆದ ಘಟನೆಯಲ್ಲ.