ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರತಿ ದಿನ ತಮ್ಮ ಕಚೇರಿಗೆ ಹೋಗಲು ದೆಹಲಿ ಮೆಟ್ರೋವನ್ನೆ ಬಳಸುತ್ತಾರೆ ಎಂಬುದು ಸುಳ್ಳು
” ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿನಿತ್ಯ ತಮ್ಮ ಕಚೇರಿಗೆ ದೆಹಲಿಯ ಮೆಟ್ರೋದಲ್ಲಿ ಓಡಾಡುತ್ತಾರೆ. ಹಾಗೆಯೆ ಅವರು ಈ ದಿನ ದೆಹಲಿಯ ಮೆಟ್ರೋದಲ್ಲಿ ಓಡಾಡುವಾಗ ಈ ವಿಡಿಯೋವನ್ನು ಚಿತ್ರಿಸಲಾಗಿದೆ. ಇದು ಮೋದಿ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ” ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯ ಮೆಟ್ರೋದಲ್ಲಿ ಪ್ರಯಾಣಿಸಿದ ವಿಡಿಯೋವೊಂದನ್ನು ಹಂಚಿಕೊಂಡು ಸಾಕಷ್ಟು ಜನ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಹೀಗೆ ಹಂಚಿಕೊಳ್ಳುತ್ತಿರುವ ವಿಡಿಯೋದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ನಿಜವೆಂದು ಕಂಡು ಬಂದಿದೆ. ಆದರೆ ಅವರು ಪ್ರತಿನಿತ್ಯ ತಮ್ಮ ಕಚೇರಿಗೆ ತೆರಳಲು ದೆಹಲಿ ಮೆಟ್ರೋ ಬಳಸುತ್ತಿದ್ದಾರೆ ಎಂಬುದು ಅನುಮಾನ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
ಹಾಗಿದ್ದರೆ ನಿಜವಾಗಿಯೂ ನಿರ್ಮಲ ಸೀತಾರಾಮನ್ ಪ್ರತಿ ದಿನ ತಮ್ಮ ಕಚೇರಿಗೆ ದೆಹಲಿ ಮೆಟ್ರೋ ಮೂಲಕ ಪ್ರಯಾಣಿಸುತ್ತಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರತಿ ದಿನ ತಮ್ಮ ಕಚೇರಿಗೆ ದೆಹಲಿ ಮೆಟ್ರೋ ಮೂಲಕ ಪ್ರಯಾಣಿಸುತ್ತಾರೆಯೇ ಎಂದು ಪರಿಶೀಲಿಸಲು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, 17 ಮೇ 2024ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಕ್ಸ್ ( ಟ್ವಿಟರ್)ನಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ವೊಂದು ಲಭ್ಯವಾಗಿದೆ, ಪೋಸ್ಟ್‌ನಲ್ಲಿರುವ ವಿಡಿಯೋಗಳೀಗೂ ವೈರಲ್ ದೃಶ್ಯಾವಳಿಗಳಿಗೂ ಸಾಮ್ಯತೆ ಇರುವುದು ಕಂಡುಬಂದಿದೆ.
ಈ ಬಗ್ಗೆ ಮತ್ತಷ್ಟು ಸರ್ಚ್ ಮಾಡಿದಾಗ, ಮೇ 17ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಆ ವರದಿಯಲ್ಲಿ “ಪೂರ್ವ ದೆಹಲಿ ಬಿಜೆಪಿ ಅಭ್ಯರ್ಥಿ ಹರ್ಷ್ ಮಲ್ಹೋತ್ರಾ ಪರ ಪ್ರಚಾರ ಮಾಡಲು ಸೀತಾರಾಮನ್ ಮಂಡಿ ಹೌಸ್‌ನಿಂದ ಮೆಟ್ರೋದಲ್ಲಿ ಸಂಚರಿಸಿದರು ಎಂದು ಉಲ್ಲೇಖಿಸಲಾಗಿದೆ. ಪ್ರಯಾಣದ ಸಂದರ್ಭದಲ್ಲಿ ಅವರು ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು ಎಂದು ಬಿಜೆಪಿ ಪದಾಧಿಕಾರಿಗಳು ಹೇಳಿದ್ದಾರೆ. ಬಳಿಕ ಹಣಕಾಸು ಸಚಿವರು ಸಮೀಪದ ಕೋಚಿಂಗ್ ಸೆಂಟರ್‌ಗೆ ಭೇಟಿ ನೀಡಿದರು, ಅಲ್ಲಿ ಅವರು ಪ್ರಾಥಮಿಕವಾಗಿ ಉದ್ಯೋಗಾವಕಾಶಗಳು, ಆರ್ಥಿಕತೆಯ ಸ್ಥಿತಿ ಮತ್ತು ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರಗಳ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಕೀವರ್ಡ್ಸ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಹರ್ಷ್ ಮಲ್ಹೋತ್ರಾ ಅವರು ತಮ್ಮ ಪರಿಶೀಲಿಸಿದ X ಹ್ಯಾಂಡಲ್‌ನಿಂದ ಮೇ 17, 2024 ರಂದು ಲಕ್ಷ್ಮಿ ನಗರ ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿ ಸಭೆಯನ್ನು ನಡೆಸಿದ್ದಾರೆ ಎಂಬುದು ಕಂಡುಬಂದಿದೆ. ಈ ವರ್ಷ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಗೆ ಮಲ್ಹೋತ್ರಾ ಅವರ ಪ್ರಚಾರದಲ್ಲಿ ಭಾಗಿಯಾಗಲು ಸೀತಾರಾಮನ್ ಅವರು ಮೆಟ್ರೋ ನಿಲ್ದಾಣಕ್ಕೆ ಬರಲಿದ್ದಾರೆ ಎಂದು ಹಂಚಿಕೊಂಡ ಪೋಸ್ಟ್ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನಿರ್ಮಲಾ ಸೀತಾರಾಮನ್ ಅವರು ತಮ್ಮ ಕಚೇರಿ ಕೆಲಸಕ್ಕಾಗಿ ಪ್ರತಿನಿತ್ಯ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ ಎಂಬುದು ಸುಳ್ಳು. ಈ ಕುರಿತು ಯಾವುದೇ ವಿಶ್ವಾಸರ್ಹ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.