ಢಾಕಾದಲ್ಲಿ ೨೦೨೩ ರಲ್ಲಿ ನಡೆದ ಬಾಂಗ್ಲಾದೇಶ ಛಾತ್ರ ಲೀಗ್ ನ ರ‍್ಯಾಲಿಯ ವೀಡಿಯೋವನ್ನು ಬಾಂಗ್ಲಾದೇಶದಲ್ಲಿ ಇತ್ತೀಚಿನ ಹಿಂದೂ ರ‍್ಯಾಲಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಕೇಸರಿ ಟೋಪಿಗಳು ಮತ್ತು ಟೀ-ಶರ್ಟ್‌ಗಳನ್ನು ಧರಿಸಿರುವ ಜನರ ದೊಡ್ಡ ಗುಂಪಿನ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ದೃಶ್ಯಗಳು ಬಾಂಗ್ಲಾದೇಶದಲ್ಲಿ ಇತ್ತೀಚಿನ ಹಿಂದೂ ರ‍್ಯಾಲಿಯನ್ನು ತೋರಿಸುತ್ತವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ವೀಡಿಯೋ ೨೦೨೩ ರದು ಮತ್ತು ಢಾಕಾದಲ್ಲಿ ವಿದ್ಯಾರ್ಥಿಗಳ ರಾಜಕೀಯ ಸಂಘಟನೆಯಾದ ಬಾಂಗ್ಲಾದೇಶ ಛಾತ್ರ ಲೀಗ್‌ನ ರ‍್ಯಾಲಿಯನ್ನು ತೋರಿಸುತ್ತದೆ. ಇದು ಹೇಳಿಕೆಯನ್ನು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.
ಹೇಳಿಕೆ:
ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ನಂತರ ತಮ್ಮ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳ ವಿರುದ್ಧ ಪ್ರತಿಭಟಿಸಲು ಆಗಸ್ಟ್ ೧೦, ೨೦೨೪ ರಂದು ಬಾಂಗ್ಲಾದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಬೀದಿಗಿಳಿದರು.
ಇದರ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಕೇಸರಿ ಟೋಪಿ ಮತ್ತು ಟೀ-ಶರ್ಟ್‌ಗಳನ್ನು ಧರಿಸಿದ ಜನರ ಬೃಹತ್ ರ‍್ಯಾಲಿಯ ೩೯ ಸೆಕೆಂಡುಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂ ರ‍್ಯಾಲಿಯನ್ನು ತೋರಿಸುತ್ತದೆ ಎಂದು ವೀಡಿಯೋದೊಂದಿಗೆ ಹಂಚಿಕೊಂಡ ಶೀರ್ಷಿಕೆ ಹೇಳುತ್ತದೆ. ಫೇಸ್‌ಬುಕ್ ಬಳಕೆದಾರರು ಆಗಸ್ಟ್ ೧೨ ರಂದು ವೀಡಿಯೋವನ್ನು ಹೀಗೆಂದು ಹೇಳಿ ಹಂಚಿಕೊಂಡಿದ್ದಾರೆ, "#ಬಾಂಗ್ಲಾದೇಶ ದ #ಹಿಂದೂ ಗಳೆಲ್ಲಾ ಒಟ್ಟಾಗಿ ಬಾಂಗ್ಲಾದ ಗಲ್ಲಿಗಳಲ್ಲಿ - ಬೀದಿಬೀದಿಗಳಲ್ಲಿ - ರಸ್ತೆರಸ್ತೆಗಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ..
ಬಾಂಗ್ಲಾದೇಶದ ರಸ್ತೆಗಳಲ್ಲಿ #Bhagwa ಧ್ವಜಗಳು ಹಾರಾಡುತಿದೆ.. ರಸ್ತೆಗಳೆಲ್ಲಾ #ಕೇಸರಿ ಮಯವಾಗಿದೆ... #BangaldeshUnderAttack #Bangladeshindus #BangladeshBleeding #Hindu." ಎಕ್ಸ್ (ಹಿಂದೆ ಟ್ವಿಟರ್) ಮತ್ತು ತ್ರೆಡ್ಸ್ ಬಳಕೆದಾರರು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಆಗಸ್ಟ್ ೧೨, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ, ಇದು ಸೆಪ್ಟೆಂಬರ್ ೨, ೨೦೨೩ ರಿಂದ ಅದೇ ವೀಡಿಯೋವನ್ನು ಹಂಚಿಕೊಳ್ಳುವ ಇನ್‌ಸ್ಟಾಗ್ರಾಮ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಇದನ್ನು ಬಾಂಗ್ಲಾದೇಶದ ಅವಾಮಿ ಲೀಗ್ ರಾಜಕಾರಣಿ ಮತ್ತು ಮಾಜಿ ಸಂಸದ ಶೇಖ್ ತನ್ಮೋಯ್ ಅವರು ಹಂಚಿಕೊಂಡಿದ್ದಾರೆ. ಪೋಷ್ಟ್ ನ ಬಂಗಾಳಿ ಶೀರ್ಷಿಕೆ ಹೀಗಿದೆ, "ಬಾಂಗ್ಲಾದೇಶ ಛಾತ್ರ ಲೀಗ್ ಐತಿಹಾಸಿಕ ಸುಹ್ರಾವರ್ದಿ ಉದ್ಯಾನದಲ್ಲಿ ಆಯೋಜಿಸಿದ್ದ ಅತಿದೊಡ್ಡ ವಿದ್ಯಾರ್ಥಿ ಕೂಟದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಜನನೇತ್ರಿ ಶೇಖ್ ಹಸೀನಾ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡರು. ಈ ರ‍್ಯಾಲಿಯಲ್ಲಿ ದೇಶದಾದ್ಯಂತ ೧ ಮಿಲಿಯನ್ ವಿದ್ಯಾರ್ಥಿಗಳು ಒಮ್ಮೆ ಕಾಣಿಸಿಕೊಂಡಿದ್ದಾರೆ. ಬಾಂಗ್ಲಾದೇಶ ಛಾತ್ರ ಲೀಗ್ ಈ ದೇಶದಲ್ಲಿ ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ, ಬಾಂಗ್ಲಾದೇಶವು ತನ್ನ ಸಾಮರ್ಥ್ಯದ ಉತ್ತುಂಗಕ್ಕೇರುತ್ತದೆ" (ಅನುವಾದಿಸಲಾಗಿದೆ).
ಸೆಪ್ಟೆಂಬರ್ ೨, ೨೦೨೩ ರಂದು ಶೇಖ್ ತನ್ಮೋಯ್ ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
೨೦೨೩ ರಲ್ಲಿ ಢಾಕಾದ ಸುಹ್ರವರ್ದಿ ಉದ್ಯಾನದಲ್ಲಿ ರ‍್ಯಾಲಿ ಸಂಭವಿಸಿದೆ ಎಂದು ಪೋಷ್ಟ್ ಹೇಳುತ್ತದೆ. ಬಾಂಗ್ಲಾದೇಶ ಛಾತ್ರ ಲೀಗ್ ನೇತ್ರಕೋನಾ ಜಿಲ್ಲಾ ಶಾಖೆಯು ಸೆಪ್ಟೆಂಬರ್ ೧, ೨೦೨೩ ರಂದು ರ‍್ಯಾಲಿಯ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.
ಇದನ್ನು ಒಂದು ಸುಳಿವಾಗಿ ತೆಗೆದುಕೊಂಡು, ನಾವು "ಛಾತ್ರ ಲೀಗ್," "ರ‍್ಯಾಲಿ," "ಢಾಕಾ," ಮತ್ತು "ವಿದ್ಯಾರ್ಥಿಗಳು" ನಂತಹ ಬಂಗಾಳಿ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ, ಇದು ಸೆಪ್ಟೆಂಬರ್ ೧, ೨೦೨೩ ರಂದು ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾದಲಾದ ಚಾನಲ್ ೨೪ ರ ವೀಡಿಯೋ ವರದಿಗೆ ನಮ್ಮನ್ನು ಕರೆದೊಯ್ಯಿತು. ಇದು ರ‍್ಯಾಲಿಯ ವೀಡಿಯೋವನ್ನು ಹೊಂದಿದೆ. ವರದಿಯ ಶೀರ್ಷಿಕೆಯು "ಛಾತ್ರ ಲೀಗ್ ರ‍್ಯಾಲಿ" (ಅನುವಾದಿಸಲಾಗಿದೆ) ಎಂದು ಓದುತ್ತದೆ ಮತ್ತು ಬಾಂಗ್ಲಾದೇಶ ಛಾತ್ರ ಲೀಗ್ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಏನ್ ಪಿ) ವಿರುದ್ಧ ರ‍್ಯಾಲಿ ಮಾಡಿದೆ ಎಂದು ಸೂಚಿಸುತ್ತದೆ.
ಸೆಪ್ಟೆಂಬರ್ ೧, ೨೦೨೩ ರಂದು ಅಪ್ಲೋಡ್ ಮಾಡಲಾದ ಚಾನಲ್ ೨೪ ರ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಇದಲ್ಲದೆ, ಸೆಪ್ಟೆಂಬರ್ ೨೦೨೩ ರ ಈ ಯಾವುದೇ ಪೋಷ್ಟ್ ಗಳು ಮತ್ತು ವೀಡಿಯೋಗಳು ಸಂಪೂರ್ಣ ರ‍್ಯಾಲಿಯನ್ನು ಯಾವುದೇ ಒಂದು ಧಾರ್ಮಿಕ ಸಮುದಾಯ ನಡೆಸಿದೆಯೇ ಇಲ್ಲವೇ ಎಂಬ ಯಾವುದೇ ಉಲ್ಲೇಖವನ್ನು ನೀಡಿಲ್ಲ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಸೆಪ್ಟೆಂಬರ್ ೨೦೨೩ ರಲ್ಲಿ ಢಾಕಾದ ಸುಹ್ರವರ್ದಿ ಉದ್ಯಾನದಲ್ಲಿ ಬಾಂಗ್ಲಾದೇಶ ಛಾತ್ರ ಲೀಗ್ ರ‍್ಯಾಲಿಯನ್ನು ತೋರಿಸುತ್ತದೆ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ವೀಡಿಯೋ ಬಾಂಗ್ಲಾದೇಶದಲ್ಲಿ ಇತ್ತೀಚಿನ ಹಿಂದೂ ರ‍್ಯಾಲಿಯನ್ನು ತೋರಿಸುತ್ತವೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ.