ಮಣಿಪುರದಲ್ಲಿ ಇತ್ತೀಚೆಗೆ ನಡೆದ ಘಟನೆಯೆಂದು ತೋರಿಸಲು ಅಸ್ಸಾಮ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಜನರು ಘೋಷಣೆ ಕೂಗಿದ ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ
ಸಾರಾಂಶ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಇತ್ತೀಚಿನ ಭೇಟಿಯ ವೇಳೆ ಮಣಿಪುರದ ನಿವಾಸಿಗಳು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಮೂಲ ವೀಡಿಯೋವು ಜನವರಿ ೨೦೨೪ ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಪ್ರತಿಭಟನೆಯನ್ನು ತೋರಿಸುತ್ತದೆ. ಇತ್ತೀಚೀನಾದ್ದು ಎಂದು ಹಂಚಿಕೊಂಡಿರುವ ವೀಡಿಯೋ ಅಸ್ಸಾಂನಲ್ಲಿ 'ಗೋ ಬ್ಯಾಕ್' ಘೋಷಣೆಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಹಳೆಯ ವೀಡಿಯೋವಾದ್ದರಿಂದ ಈ ಬಗ್ಗೆ ಹಂಚಿಕೊಂಡಿರುವ ಹೇಳಿಕೆಗಳು ತಪ್ಪು.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಜನರು "ಗೋ ಬ್ಯಾಕ್" ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಜುಲೈ ೮, ೨೦೨೪ ರಂದು ಗಾಂಧಿಯವರ ಇತ್ತೀಚಿನ ಮಣಿಪುರ ಭೇಟಿಯ ಸಮಯದಲ್ಲಿ ಇದು ಸಂಭವಿಸಿದೆ ಎಂದು ಈ ವೀಡಿಯೋ ಹಂಚಿಕೊಂಡಿರುವ ಪೋಷ್ಟ್ ಗಳ ಶೀರ್ಷಿಕೆ ಹೇಳುತ್ತದೆ. ಅವರ ಭಾಷಣಗಳಲ್ಲಿ ಉಪಯುಊಗಿಸಿದ ಮಾತುಗಳಿಂದಾಗಿ ಸ್ಥಳೀಯ ನಿವಾಸಿಗಳು ಅವರನ್ನು ಹಿಂತಿರುಗಿ ಹೋಗಲು ಹೇಳುತ್ತಿದ್ದಾರೆ ಎಂದು ಇದು ಸೂಚಿಸುತ್ತದೆ. ಎಕ್ಸ್ ಬಳಕೆದಾರರು ಜುಲೈ ೯, ೨೦೨೪ ರಂದು ವೀಡಿಯೋವನ್ನು ಪೋಷ್ಟ್ ಮಾಡಿದ್ದು, ಇದು ೩.೪೯ ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಫೇಸ್‌ಬುಕ್‌ನಂತಹ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ಇದೇ ರೀತಿಯ ಹೇಳಿಕೆಗಳೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಜುಲೈ ೯, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಜನವರಿ ೨೧, ೨೦೨೪ ರಂದು ಸುದ್ದಿ ಸಂಸ್ಥೆ ಎಎನ್‌ಐ ಎಕ್ಸ್ ನಲ್ಲಿ ಹಂಚಿಕೊಂಡಿರುವ ವೀಡಿಯೋವನ್ನು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೋದ ಮೇಲಿನ ಬಲ ಮೂಲೆಯಲ್ಲಿ ಎಎನ್‌ಐ ಲೋಗೋವನ್ನು ಹೊಂದಿದೆ ಎಂಬುದು ಗಮನಿಸಬೇಕಾದ ಸಂಗತಿ.
ಜನವರಿ ೨೧, ೨೦೨೪ ರಂದು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಎಎನ್‌ಐ ಪೋಷ್ಟ್ ಮಾಡಿದ ವೀಡಿಯೋದ ಸ್ಕ್ರೀನ್‌ಶಾಟ್.
ಈ ವೀಡಿಯೋದ ಶೀರ್ಷಿಕೆಯು ಹೀಗಿದೆ, "ಅಸ್ಸಾಂ: 'ರಾಹುಲ್ ಗಾಂಧಿ ಗೋ ಬ್ಯಾಕ್" ಮತ್ತು "ಅನ್ಯಾಯ್ ಯಾತ್ರಾ" ಎಂಬ ಪೋಸ್ಟರ್‌ಗಳನ್ನು ಹೊತ್ತ ಹೆಚ್ಚಿನ ಸಂಖ್ಯೆಯ ಜನರು ಇಂದು ಸಂಜೆ ನಾಗಾಂವ್ ನ ಅಂಬಾಗನ್ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿದರು." ಈ ಘಟನೆ ನಡೆದಿರುವುದು ಅಸ್ಸಾಂನ ನಾಗಾಂವ್ ಜಿಲ್ಲೆಯ ಅಂಬಗಾನ್ ಪ್ರದೇಶದಲ್ಲೇ ಹೊರತು ಮಣಿಪುರದಲ್ಲಲ್ಲ ಎಂಬುದನ್ನು ಇದು ಸೂಚಿಸುತ್ತದೆ.
ಜನವರಿ ೨೦೨೪ ರಿಂದ ಈ ಘಟನೆಯ ಕುರಿತು ಹಲವಾರು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಜನವರಿ ೨೨, ೨೦೨೪ ರಂದು ಎನ್‌ಡಿಟಿವಿ ಪ್ರಕಟಿಸಿದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಲೇಖನವು ರಾಹುಲ್ ಗಾಂಧಿಯವರ "ಭಾರತ್ ಜೋಡೋ ನ್ಯಾಯ್ ಯಾತ್ರಾ" ದ ಸಮಯದಲ್ಲಿ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿ ಮಾಡಿದೆ. ರಾಹುಲ್ ಗಾಂಧಿ ಮತ್ತು ಇತರ ನಾಯಕರು ಅಂಬಗಾನ್‌ನ ರೆಸ್ಟೋರೆಂಟ್‌ನಲ್ಲಿದ್ದಾಗ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಜನವರಿ ೨೨, ೨೦೨೪ ರಂದು ಎನ್‌ಡಿಟಿವಿ ಪ್ರಕಟಿಸಿದ ಸುದ್ದಿ ಲೇಖನದ ಸ್ಕ್ರೀನ್‌ಶಾಟ್.
ಇದಲ್ಲದೆ, ರಾಹುಲ್ ಗಾಂಧಿ ಅವರು ಜುಲೈ ೮, ೨೦೨೪ ರಂದು ಮಣಿಪುರಕ್ಕೆ ಭೇಟಿ ನೀಡಿದ್ದರು ಮತ್ತು ಈ ಭೇಟಿಯ ಸಂದರ್ಭದಲ್ಲಿ ಅವರು ಜಿಬ್ರಾಮ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿ ಜನಾಂಗೀಯ ಹಿಂಸಾಚಾರದಿಂದ ಸ್ಥಳಾಂತರಗೊಂಡ ಜನರೊಂದಿಗೆ ಸಂವಾದ ನಡೆಸಲು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ನಂತರ ಇದು ಅವರ ಮೊದಲ ಭೇಟಿಯಾಗಿದೆ ಮತ್ತು ಮೇ ೨೦೨೩ ರಲ್ಲಿ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಅಲ್ಲಿಗೆ ಅವರ ಮೂರನೇ ಭೇಟಿಯಾಗಿದೆ. ಆದರೆ, ಮಣಿಪುರದ ಜನರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಎತ್ತಿದ್ದಾರೆ ಎಂದು ಹೇಳಿಕೊಂಡು ಇತ್ತೀಚೆಗೆ ವೈರಲ್ ಆದ ವೀಡಿಯೋ ಅವರು ಮಣಿಪುರಕ್ಕೆ ಭೇಟಿ ನೀಡಿದಾಗ ಸಂಭವಿಸಿದ ಘಟನೆಯದ್ದಲ್ಲ.
ತೀರ್ಪು:
ರಾಹುಲ್ ಗಾಂಧಿಯವರ ವಿರುದ್ಧದ ಪ್ರತಿಭಟನೆಯು ಜನವರಿ ೨೦೨೪ ರಲ್ಲಿ ಅಸ್ಸಾಂನಲ್ಲಿ ನಡೆದಿದೆ, ಜುಲೈ ೨೦೨೪ ರಲ್ಲಿ ಮಣಿಪುರ ಅಲ್ಲ ಎಂದು ವೈರಲ್ ವೀಡಿಯೋದ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಮಣಿಪುರದ ಜನರು ರಾಹುಲ್ ಗಾಂಧಿ ಅವರ ಇತ್ತೀಚಿನ ಭೇಟಿಯ ಸಮಯದಲ್ಲಿ ಅವರ ವಿರುದ್ಧ ಘೋಷಣೆಗಳನ್ನು ಎತ್ತಿದ್ದಾರೆ ಎಂದು ತೋರಿಸಲು ವೈರಲ್ ಕ್ಲಿಪ್ ಅನ್ನು ತಪ್ಪಾದ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ, ಹಳೆಯ ವೀಡಿಯೋವನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಮಾಡಿದ ಇಂತಹ ಹೇಳಿಕೆಗಳು ತಪ್ಪು.