ಟೋಲ್ ಪ್ಲಾಜಾಗಳ ಬಳಿ ವಾಸಿಸುವ ಜನರಿಗೆ ಟೋಲ್ ವಿನಾಯಿತಿ ಎಂದು ತೋರಿಸಲು ೨೦೨೨ ರ ಸಂಬಂಧವಿಲ್ಲದ ವೀಡಿಯೋ ಕ್ಲಿಪ್ ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ಪ್ಲಾಜಾಗಳ ೬೦ ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ನಾಗರಿಕರಿಗೆ ಟೋಲ್ ವಿನಾಯಿತಿ ಘೋಷಿಸಿದ್ದಾರೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ. ಆದರೆ, ಈ ವೀಡಿಯೋ ೨೦೨೨ ರದ್ದು, ಮತ್ತು ಗಡ್ಕರಿ ಅವರು ಈ ವಿಡಿಯೋದಲ್ಲಿ ಸ್ಥಳೀಯರಿಗೆ ಪಾಸ್‌ಗಳನ್ನು ನೀಡುವುದರ ಬಗ್ಗೆಯ ಪ್ರತ್ಯೇಕ ಸಮಸ್ಯೆಗಳು ಮತ್ತು ಟೋಲ್ ಪ್ಲಾಜಾಗಳ ನಡುವಿನ ಅಂತರವನ್ನು ಚರ್ಚಿಸುತ್ತಿರುವುದನ್ನು ತೋರಿಸುತ್ತದೆ. ವೈರಲ್ ವೀಡಿಯೋವನ್ನು ಅದರ ದೀರ್ಘ ಆವೃತ್ತಿಯಿಂದ ತೆಗೆದುಕೊಂಡು ತಪ್ಪಾದ ನಿರೂಪಣೆಗಳೊಂದಿಗೆ ಇತ್ತೀಚಿನದ್ದು ಎಂದು ಹೇಳಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಹೇಳಿಕೆ:
ಎಕ್ಸ್ ನಲ್ಲಿನ ಬಳಕೆದಾರರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ಪ್ಲಾಜಾಗಳ ೬೦ ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಟೋಲ್ ವಿನಾಯಿತಿಯನ್ನು ಘೋಷಿಸುತ್ತಿರುವ ವೀಡಿಯೋ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಜುಲೈ ೨೮, ೨೦೨೪ ರಂದು ಪೋಷ್ಟ್ ಮಾಡಲಾಗಿದೆ ಮತ್ತು ಪೋಷ್ಟ್ ನ ಶೀರ್ಷಿಕೆಯು ಹೀಗೆ ಹೇಳುತ್ತದೆ "ನಿಮ್ಮ ಮನೆಯಿಂದ ೬೦ ಕಿ.ಮೀ ಒಳಗೆ ಯಾವುದೇ ಟೋಲ್ ಶುಲ್ಕವನ್ನು ಪಾವತಿಸಲಾಗುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ತೋರಿಸಬೇಕಾಗುತ್ತದೆ. @ nitin_gadkari ಇದು ಕೇಂದ್ರ ಸರ್ಕಾರದ ಆದೇಶವಾಗಿದೆ (ಅನುವಾದಿಸಲಾಗಿದೆ)." ಈ ಪೋಷ್ಟ್ ಸುಮಾರು ೧೩ ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಲವಾರು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ವೀಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.
ಈ ವೀಡಿಯೋವನ್ನು ಹಂಚಿಕೊಳ್ಳುವ ಪೋಷ್ಟ್ ಗಳು ಇದು ಕೇಂದ್ರ ಸರ್ಕಾರದ ಹೊಸ ಆದೇಶ ಮತ್ತು ಟೋಲ್ ಸಂಗ್ರಹ ಪದ್ಧತಿಯಲ್ಲಿ ಮಹತ್ವದ ನೀತಿ ಬದಲಾವಣೆಯನ್ನು ಸೂಚಿಸುತ್ತದೆಎಂದು ಹೇಳಿಕೊಂಡಿವೆ.
ಜುಲೈ ೨೮, ೨೦೨೪ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಬಗ್ಗೆ ಹೆಚ್ಚಿನ ತನಿಖೆ ಮಾಡಲು ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಮಾರ್ಚ್ ೨೨, ೨೦೨೨ ರಂದು ನಿತಿನ್ ಗಡ್ಕರಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೋದ ದೀರ್ಘ ಆವೃತ್ತಿಗೆ ನಮ್ಮನ್ನು ಕರೆದೊಯ್ಯಿತು. ೨೫:೧೪ ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ ಗಡ್ಕರಿ ಅವರು ಇತರ ಸಂಸದರಿಂದ ಎರಡು ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಿರುವುದನ್ನು ನೋಡಬಹುದು. ಮೊದಲಿಗೆ, ಅವರು ತಮ್ಮ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿದ ನಂತರ ಟೋಲ್ ಪ್ಲಾಜಾಗಳ ಬಳಿ ಸ್ಥಳೀಯ ನಿವಾಸಿಗಳಿಗೆ ಪಾಸ್‌ಗಳನ್ನು ನೀಡುವ ಪ್ರಸ್ತಾಪವನ್ನು ಚರ್ಚಿಸುತ್ತಾರೆ. ತಕ್ಷಣವೇ, ಗಡ್ಕರಿ ಅವರು ೬೦ ಕಿಮೀ ವ್ಯಾಪ್ತಿಯಲ್ಲಿ ಎರಡು ಟೋಲ್ ಪ್ಲಾಜಾಗಳು ಇರಬಾರದು ಎಂದು ಹೇಳಿಕೊಂಡು ಕೆಲವು ಸ್ಥಳಗಳಲ್ಲಿ ಈ ನಿಯಮವನ್ನು ಅನುಸರಿಸಲಾಗುತ್ತಿಲ್ಲ ಎಂದು ಒಪ್ಪಿಕೊಂಡರು. ನಂತರ ಹೆಚ್ಚುವರಿಯಾಗಿರುವ ಟೋಲ್ ಪ್ಲಾಜಾಗಳನ್ನು ಮುಚ್ಚುವ ಮೂಲಕ ಅವರು ಮೂರು ತಿಂಗಳೊಳಗೆ ೬೦ ಕಿಮೀ ವ್ಯಾಪ್ತಿಯೊಳಗೆ ಕೇವಲ ಒಂದು ಟೋಲ್ ಪ್ಲಾಜಾ ಇರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಬದ್ಧರಾಗುತ್ತಾರೆ.
ಮಾರ್ಚ್ ೨೨, ೨೦೨೨ ರಂದು ನಿತಿನ್ ಗಡ್ಕರಿ ಅವರ ಅಧಿಕೃತ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಇದನ್ನು ಮತ್ತಷ್ಟು ಪರಿಶೀಲಿಸಲು, ನಾವು ಮಾರ್ಚ್ ೨೨, ೨೦೨೨ ರಂದು ನಡೆದ ಲೋಕಸಭೆಯ ಪ್ರಕ್ರಿಯೆಗಳನ್ನು ಪರಿಶೀಲಿಸಿದ್ದೇವೆ. ಅಂದಿನ ಅಧಿಕೃತ ಪ್ರತಿಲೇಖನವು ಗಡ್ಕರಿ ಅವರು ವಿವಿಧ ಸಂಸದರ ವಿಭಿನ್ನ ಸಲಹೆಗಳಿಗೆ ಪ್ರತಿಕ್ರಯಿಸುತ್ತಿದ್ದರು ಎಂದು ಖಚಿತಪಡಿಸುತ್ತದೆ. ಮಾರ್ಚ್ ೨೨, ೨೦೨೨ ರ ದಿನಾಂಕದ ದೂರದರ್ಶನ ನ್ಯಾಷನಲ್ ನ ಯೂಟ್ಯೂಬ್ ಖಾತೆಯಿಂದ ಲೈವ್-ಸ್ಟ್ರೀಮ್ ಮಾಡಿದ ವೀಡಿಯೋವನ್ನು ಸಹ ನಾವು ಕಂಡುಕೊಂಡಿದ್ದೇವೆ.
ಮಾರ್ಚ್ ೨೨, ೨೦೨೨ ರ ಲೋಕಸಭೆಯ ಪ್ರಕ್ರಿಯೆಗಳ ಅಧಿಕೃತ ಪ್ರತಿಲೇಖನದ ಸ್ಕ್ರೀನ್‌ಶಾಟ್.
ಇದು, ವೈರಲ್ ವೀಡಿಯೋ ೨೦೨೨ ರದ್ದು ಎಂದು ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ಟೋಲ್ ಪ್ಲಾಜಾದಿಂದ ೬೦ ಕಿಲೋಮೀಟರ್ ಒಳಗೆ ವಾಸಿಸುವ ಜನರಿಗೆ ಟೋಲ್ ಪಾವತಿಯಿಂದ ವಿನಾಯಿತಿ ನೀಡುವ ಕುರಿತು ನಿಜವಾಗಿಯೂ ಮಾತನಾಡಿದ್ದಾರೆ ಎಂದು ತಪ್ಪಾಗಿ ತೋರಿಸಲು ನಿತಿನ್ ಗಡ್ಕರಿ ಅವರ ಭಾಷಣದ ದೀರ್ಘ ಆವೃತ್ತಿಯಿಂದ ಕ್ಲಿಪ್ ಮಾಡಲಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ.
ತೀರ್ಪು:
ಮೂಲ ವೀಡಿಯೊದ ವಿಶ್ಲೇಷಣೆಯು ನಿತಿನ್ ಗಡ್ಕರಿ ಅವರು ಟೋಲ್ ಪ್ಲಾಜಾಗಳ ೬೦ ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಟೋಲ್ ವಿನಾಯಿತಿಯನ್ನು ಘೋಷಿಸಿಲ್ಲ ಮತ್ತು ಕ್ಲಿಪ್ ಮಾರ್ಚ್ ೨೦೨೨ ರ ಭಾಷಣದಿಂದ ಬಂದಿದೆ ಎಂಬುದನ್ನು ಬಹಿರಂಗವಾಗಿದೆ. ವೈರಲ್ ವೀಡಿಯೋ ಕ್ಲಿಪ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದ್ದರಿಂದ ಈ ವೈರಲ್ ಕ್ಲಿಪ್ ಅನ್ನು ಹಂಚಿಕೊಳ್ಳುವ ಮೂಲಕ ಮಾಡಿರುವ ಹೇಳಿಕೆಗಳು ತಪ್ಪು.