೨೦೦೧ ರ ಎಲ್ ಸಾಲ್ವಡಾರ್ ಭೂಕಂಪದ ಚಿತ್ರವನ್ನು ವಯನಾಡ್ ಭೂಕುಸಿತ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಭೂಕುಸಿತದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ, ಇದು ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ನಂತರದ ಪರಿಣಾಮವನ್ನು ತೋರಿಸುತ್ತದೆ. ಆದರೆ, ಈ ಚಿತ್ರವು ೨೦೦೧ ರ ಎಲ್ ಸಾಲ್ವಡಾರ್ ಭೂಕಂಪದಿಂದ ಬಂದಿದೆ. ವೈರಲ್ ಹೇಳಿಕೆ ಸಂಬಂಧವಿಲ್ಲದ ಮಾಧ್ಯಮವನ್ನು ಆಧರಿಸಿದೆ, ಆದ್ದರಿಂದ ಇದು ತಪ್ಪಾಗಿದೆ.
ಹೇಳಿಕೆ:
ಕೇರಳದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯು ವಯನಾಡ್ ಜಿಲ್ಲೆಯಲ್ಲಿ ವಿನಾಶಕಾರಿ ಭೂಕುಸಿತಕ್ಕೆ ಕಾರಣವಾಗಿದ್ದು, ಗಮನಾರ್ಹವಾದ ಜೀವ ಮತ್ತು ಆಸ್ತಿ ಹಾನಿಯಾಗಿದೆ. ಆಗಸ್ಟ್ ೭, ೨೦೨೪ ರ ವರೆಗೆ, ಸಾವಿನ ಸಂಖ್ಯೆ ೪೧೩ ಕ್ಕೆ ಏರಿದೆ, ರಕ್ಷಣಾ ಪ್ರಯತ್ನಗಳು ಇನ್ನೂ ನಡೆಯುತ್ತಿವೆ.
ಈ ದುರಂತದ ಮಧ್ಯೆ, ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ವಯನಾಡ್ ಭೂಕುಸಿತದ ನಂತರದ ಪರಿಣಾಮವನ್ನು ತೋರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂತಹ ಒಂದು ಪೋಷ್ಟ್ ಅನ್ನು ಜುಲೈ ೩೧, ೨೦೨೪ ರಂದು ಹಂಚಿಕೊಳ್ಳಲಾಗಿದೆ, ಇದು ೪.೭೮ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು ಜನನಿಬಿಡ ಪ್ರದೇಶದ ಮೇಲೆ ಪರಿಣಾಮ ಬೀರುವ ಬೃಹತ್ ಭೂಕುಸಿತದ ವೈಮಾನಿಕ ಚಿತ್ರಣವನ್ನು ಒಳಗೊಂಡಿದ್ದು, "#WayanadLandslide ಇಂದು ವಯನಾಡ್, ನಾಳೆ ತಮಿಳುನಾಡು- ನೀಲಗಿರಿ ಅಥವಾ ಕನ್ಯಾಕುಮಾರಿ ಆಗಿರಬಹುದು, ಪಶ್ಚಿಮ ಘಟ್ಟಗಳಲ್ಲಿ ನಿಮ್ಮ ವೈಯಕ್ತಿಕ ಲಾಭಕ್ಕಾಗಿ ಕಲ್ಲುಗಳನ್ನು ಸ್ಫೋಟಿಸುವುದನ್ನು ನಿಲ್ಲಿಸಿ!" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ದೃಶ್ಯವನ್ನು ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಇತರ ಬಳಕೆದಾರರಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಜುಲೈ ೩೧, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ಚಿತ್ರವನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ್ದೇವೆ. ಇದು ನಮ್ಮನ್ನು "ಎಲ್ ಸಾಲ್ವಡಾರ್ ಭೂಕಂಪ" ಶೀರ್ಷಿಕೆಯ ಯುನೈಟೆಡ್ ಕಿಂಗ್ಡಮ್ ಸುದ್ದಿ ವೆಬ್‌ಸೈಟ್ ದಿ ಗಾರ್ಡಿಯನ್‌ನ ಫೋಟೋ ಆರ್ಕೈವ್‌ಗೆ ಕರೆದೊಯ್ಯಿತು. ವೈರಲ್ ಚಿತ್ರಕ್ಕೆ ಹೊಂದಾಣಿಕೆ ಆಗುವ ಈ ಚಿತ್ರದ ವಿವರಣೆ ಹೀಗಿದೆ: "ಸ್ಯಾನ್ ಸಾಲ್ವಡಾರ್ ಬಳಿಯ ಸಾಂಟಾ ಟೆಕ್ಲಾದಲ್ಲಿ ವಿನಾಶ, ಭೂಕಂಪದ ನಂತರ ವಿಮಾನದಿಂದ ನೋಡಿದಂತೆ, ಇದು ರಿಕ್ಟರ್ ಮಾಪಕದಲ್ಲಿ ೭.೬ ಅಳತೆ ಮತ್ತು ಭಾರಿ ಭೂಕುಸಿತಕ್ಕೆ ಕಾರಣವಾಯಿತು."
ದಿ ಗಾರ್ಡಿಯನ್ ಫೋಟೋ ಆರ್ಕೈವ್‌ನ ಸ್ಕ್ರೀನ್‌ಶಾಟ್.
ಹೆಚ್ಚಿನ ತನಿಖೆಯು ನಮ್ಮನ್ನು ಫೆಬ್ರವರಿ ೨೦೦೬ ರ ಯು.ಎಸ್. ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ದ "ಗ್ರಿಡ್ಡಿಂಗ್ ದಿ ರಿಸ್ಕ್ ಆಫ್ ನ್ಯಾಚುರಲ್ ಡಿಸಾಸ್ಟರ್ಸ್" ಎಂಬ ಶೀರ್ಷಿಕೆಯ ವರದಿಗೆ ಕರೆದೊಯ್ಯಿತು, ಇದು ಅದೇ ಚಿತ್ರವನ್ನು ಒಳಗೊಂಡಿದೆ. ಚಿತ್ರದ ವಿವರಣೆ ಹೀಗೆಂದು ಹೇಳಿದೆ - "ಎಲ್ ಸಾಲ್ವಡಾರ್‌ನ ಸಾಂಟಾ ಟೆಕ್ಲಾ ಬಳಿಯ ನೆರೆಹೊರೆಯಲ್ಲಿ ೨೦೦೧ ರ ಎಲ್ ಸಾಲ್ವಡಾರ್ ಭೂಕಂಪ-ಪ್ರೇರಿತ ಭೂಕುಸಿತವು ಹಲವಾರು ಮನೆಗಳನ್ನು ಟನ್‌ಗಟ್ಟಲೆ ಮಣ್ಣಲ್ಲಿ ಹೂತುಹಾಕಿದೆ."
ಎಲ್ ಸಾಲ್ವಡಾರ್ ದುರಂತವನ್ನು ಚರ್ಚಿಸುವ "ಕ್ವೇಕ್ ಮಡ್‌ಸ್ಲೈಡ್‌ಗಳು ಅರಣ್ಯನಾಶದ ಮೇಲೆ ಆರೋಪಿಸಲಾಗಿದೆ" ಎಂಬ ಶೀರ್ಷಿಕೆಯ ಜನವರಿ ೧೬, ೨೦೦೧ ರ ದಿನಾಂಕದ ಬಿಬಿಸಿ ನ್ಯೂಸ್ ಲೇಖನವನ್ನು ಸಹ ನಾವು ಕಂಡುಕೊಂಡಿದ್ದೇವೆ. ಲಾಸ್ ಕೊಲಿನಾಸ್‌ನಲ್ಲಿ ಸಂಭವಿಸಿದ ಭಾರೀ ಭೂಕುಸಿತದ ಅಡಿಯಲ್ಲಿ ೫೦೦ ಕ್ಕೂ ಹೆಚ್ಚು ಮನೆಗಳು ಮತ್ತು ೧,೦೦೦ ಕ್ಕೂ ಹೆಚ್ಚು ಜನರು ಸಮಾಧಿಯಾಗಿದ್ದಾರೆ ಎಂದು ಲೇಖನವು ಉಲ್ಲೇಖಿಸುತ್ತದೆ, ಇದು ವೈರಲ್ ಚಿತ್ರದಲ್ಲಿ ಚಿತ್ರಿಸಿದ ದೃಶ್ಯಕ್ಕೆ ಹೊಂದಿಕೆಯಾಗುತ್ತದೆ. ೨೦೦೧ ರ ಈ ದುರಂತದ ಬಗ್ಗೆ ಅನೇಕ ಇತರ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ.
ಜನವರಿ ೧೬, ೨೦೦೧ ರ ಬಿಬಿಸಿ ನ್ಯೂಸ್ ವರದಿಯ ಸ್ಕ್ರೀನ್‌ಶಾಟ್.
ತೀರ್ಪು:
ವೈರಲ್ ದೃಶ್ಯದ ವಿಶ್ಲೇಷಣೆಯು ಅದು ೨೦೦೧ ರ ಎಲ್ ಸಾಲ್ವಡಾರ್ ಭೂಕಂಪದ ಚಿತ್ರ ಮತ್ತು ಇತ್ತೀಚಿನ ವಯನಾಡ್ ಭೂಕುಸಿತದಿಂದಲ್ಲ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ದೃಶ್ಯದೊಂದಿಗೆ ಹಂಚಿಕೊಂಡಿರುವ ಹೇಳಿಕೆ ತಪ್ಪು.