- Home
- /
- ಉನ್ನತ ಹಕ್ಕು ವಿಮರ್ಶೆ
- /
- ಬೆಂಗಳೂರಿನಲ್ಲಿ ಕನ್ನಡ ಪರ...
ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಯೊಂದು ಹಿಂದಿ ಸೈನ್ ಬೋರ್ಡ್ ಅನ್ನು ಧ್ವಂಸಗೊಳಿಸಿದ ಹಳೆಯ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ
ಸಾರಾಂಶ:
ಕರ್ನಾಟಕದಲ್ಲಿ ದುಷ್ಕರ್ಮಿಗಳು ಹಿಂದಿ ಸೈನ್‌ಬೋರ್ಡ್‌ಗಳನ್ನು ಹರಿದು ಹಾಕುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಈ ವೀಡಿಯೋ ಸೆಪ್ಟೆಂಬರ್ ೧೪, ೨೦೨೦ ರದ್ದು ಮತ್ತು ಬೆಂಗಳೂರಿನ ರೈಲ್ವೆ ನಿಲ್ದಾಣದ ಹೊರಗೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಹಿಂದಿ ಫಲಕವನ್ನು ಧ್ವಂಸಗೊಳಿಸುವುದನ್ನು ತೋರಿಸುತ್ತದೆ. ಆದ್ದರಿಂದ, ಈ ಘಟನೆಯು ಇತ್ತೀಚಿನದ್ದು ಎಂಬ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಬೆಂಗಳೂರಿನಲ್ಲಿ ಹಿಂದಿ ಬರಹಗಳನ್ನು ದುಷ್ಕರ್ಮಿಗಳು ಧ್ವಾಮ್ಸಗೊಳಿಸುತ್ತಿದ್ದರೆ ಎಂದು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಶಾಲೆಗಳಿಗೆ ಇತ್ತೀಚೆಗೆ ಬಾಂಬ್ ಬೆದರಿಕೆಗಳು ಬಂದಿರುವುದನ್ನು ಕೂಡ ವೀಡಿಯೋ ತೋರಿಸುತ್ತದೆ. ವೀಡಿಯೋದೊಂದಿಗೆ ಹಂಚಿಕೊಂಡಿರುವ ಶೀರ್ಷಿಕೆಯು ಘಟನೆಯು ಇತ್ತೀಚಿನದು ಎಂದು ಸೂಚಿಸುತ್ತದೆ. ಎಕ್ಸ್ ಬಳಕೆದಾರರು ಜೂನ್ ೨೮, ೨೦೨೪ ರಂದು ಹೀಗೆ ಹೇಳಿಕೊಂಡು ವೀಡಿಯೋವನ್ನು ಹಂಚಿಕೊಂಡಿದ್ದಾರೆ, "ಕರ್ನಾಟಕದಲ್ಲಿ ಏನಾಗುತ್ತಿದೆ ?? ಈ ಪ್ರಾದೇಶಿಕ ಗುಂಪುಗಳು ರಾಜ್ಯ ಮತ್ತು ಅದರ ಸಂಸ್ಕೃತಿಯನ್ನು ನಾಶಮಾಡುತ್ತಿವೆ, ಅವರಿಗೆ ಇಂಗ್ಲಿಷ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಆದರೆ ಹಿಂದಿಯೊಂದಿಗೆ ಎಲ್ಲಾ ಸಮಸ್ಯೆಗಳಿವೆ ... ಇದು ಭಾರತವನ್ನು ಮೊದಲು ಧರ್ಮದ ಹೆಸರಿನಲ್ಲಿ ಮತ್ತು ನಂತರ ಭಾಷೆ ಮತ್ತು ಪ್ರದೇಶದ ಹೆಸರಿನಲ್ಲಿ ಹೇಗೆ ರಾಜ್ಯಗಳಾಗಿ ವಿಂಗಡಿಸಲಾಯಿತು ... ಒಡೆದು ಆಳುವುದು ಅವರ ನೀತಿಯಾಗಿದೆ ಈ ಜನರು ಭಾರತವನ್ನು ಹಾನಿ ಮಾಡಲು ಬಯಸುವ ಯಾವುದೇ ವಿದೇಶಿ ಶಕ್ತಿ ಅಥವಾ ಭಯೋತ್ಪಾದಕ ಗುಂಪುಗಳಿಗಿಂತ ಕಡಿಮೆಯಿಲ್ಲ ... (ಅನುವಾದಿಸಲಾಗಿದೆ)." ಈ ಪೋಷ್ಟ್ ಸುಮಾರು ೫,೬೭೯ ವೀಕ್ಷಣೆಗಳು, ೨೧೦ ಇಷ್ಟಗಳು ಮತ್ತು ೧೨೮ ಮರು ಪೋಷ್ಟ್ ಗಳನ್ನು ಸ್ವೀಕರಿಸಿದೆ. ಎಕ್ಸ್ ಬಳಕೆದಾರರಾದ @MithilaWaala ಆಗಾಗ ತಪ್ಪು ನಿರೂಪಣೆಗಳನ್ನು ಹಂಚಿಕೊಳ್ಳುತ್ತಾರೆ.
ಜೂನ್ ೨೮, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಮತ್ತೊಬ್ಬ ಬಳಕೆದಾರರು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಜೂನ್ ೨೯, ೨೦೨೪ ರಂದು ಇದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಈ ವೀಡಿಯೊವೀಡಿಯೋವನ್ನು ಹಂಚಿಕೊಂಡಿರುವುದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್ ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಇದು ವೈರಲ್ ವೀಡಿಯೋವನ್ನು ಹೊಂದಿರುವ ಸೆಪ್ಟೆಂಬರ್ ೧೪, ೨೦೨೦ ರಂದು ಎಕ್ಸ್ ಪೋಷ್ಟ್ ನತ್ತ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೋದ ಶೀರ್ಷಿಕೆಯು ಹೀಗೆ ಹೇಳುತ್ತದೆ, "ಉತ್ತರ ಭಾರತವು ನಮ್ಮ ಭಾಷೆಗಳಿಗೆ ತಮ್ಮ ಪ್ರದೇಶದಲ್ಲಿ ಎಂದಿಗೂ ಜಾಗವನ್ನು ನೀಡಲಿಲ್ಲ, ಹಾಗಾದರೆ ದಕ್ಷಿಣವು ಹಿಂದಿಗೆ ಏಕೆ ಅವಕಾಶ ನೀಡಬೇಕು? #HindiDiwas #StopHindiImposition (ಅನುವಾದಿಸಲಾಗಿದೆ)."
ಸೆಪ್ಟೆಂಬರ್ ೧೪, ೨೦೨೦ ರಂದು ಎಕ್ಸ್ ನಲ್ಲಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್.
ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ಸೈನ್ ಬೋರ್ಡ್ "ಕೆಎಸ್ಆರ್ ಬೆಂಗಳೂರು ನಿಲ್ದಾಣ" ಎಂದು ಬರೆದಿರುವುದು ಕಂಡುಬಂದಿದೆ. ಈ ಘಟನೆಯು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣದಲ್ಲಿ ಸಂಭವಿಸಿದೆ ಎಂದು ಸೂಚಿಸುತ್ತದೆ.
ವೈರಲ್ ವಿಡಿಯೋದಲ್ಲಿ ಕಂಡುಬಂದಿರುವ ಸೈನ್‌ಬೋರ್ಡ್‌ನ ಸ್ಕ್ರೀನ್‌ಶಾಟ್.
ಇದರಿಂದ ಸುಳಿವುಗಳನ್ನು ತೆಗೆದುಕೊಂಡು ನಾವು "ಕೆ ಎಸ್ ಆರ್ ಬೆಂಗಳೂರು ನಿಲ್ದಾಣ," "ಹಿಂದಿ ಸೈನ್ ಬೋರ್ಡ್," ಮತ್ತು "ಧ್ವಂಸಗೊಳಿಸಲಾಗಿದೆ" ಮೊದಲಾದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದ್ದೇವೆ. ಇದು ಸೆಪ್ಟೆಂಬರ್ ೧೪, ೨೦೨೦ ರ ದಿ ನ್ಯೂಸ್ ಮಿನಿಟ್ ವರದಿಗೆ ನಮ್ಮನ್ನು ಕರೆದೊಯ್ಯಿತು. ವರದಿಯು ವೈರಲ್ ವಿಡಿಯೋದಲ್ಲಿನ ಒಂದು ಕೀಫ್ರೇಮ್ ನ ಸ್ಕ್ರೀನ್‌ಶಾಟ್ ಹೊಂದಿದೆ.
ಸೆಪ್ಟೆಂಬರ್ ೧೪, ೨೦೨೦ ರಂದು ಪ್ರಕಟವಾದ ದಿ ನ್ಯೂಸ್ ಮಿನಿಟ್ ವರದಿಯ ಸ್ಕ್ರೀನ್‌ಶಾಟ್.
ವರದಿಯ ಪ್ರಕಾರ, ಸೆಪ್ಟೆಂಬರ್ ೧೪, ೨೦೨೦ ರಂದು ಹಿಂದಿ ಹೇರಿಕೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಕನ್ನಡ ಪರ ಸಂಘಟನೆಯಾದ ಕರುನಾಡ ಸೇವಕರು ಕಾರ್ಯಕರ್ತರು ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಬೋರ್ಡ್ ಅನ್ನು ಧ್ವಂಸಗೊಳಿಸಿದರು. ಹಿಂದಿ ಬರಹವನ್ನು ಸಂಪೂರ್ಣವಾಗಿ ಧ್ವಂಸ ಮಾಡುವ ಸಂದರ್ಭದಲ್ಲಿ ಕಾರ್ಯಕರ್ತರು ಸೈನ್‌ಬೋರ್ಡ್‌ನಲ್ಲಿ ಇಂಗ್ಲಿಷ್ ಮತ್ತು ಕನ್ನಡ ಬರಹಗಳನ್ನು ಹಾಗೆಯೇ ಬಿಟ್ಟರು.
ಟೈಮ್ಸ್ ಆಫ್ ಇಂಡಿಯಾ ಮೊದಲಾದ ಇತರ ಸುದ್ದಿ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡಿವೆ. ಡಿಸೆಂಬರ್ ೨೭, ೨೦೨೩ ರಂದು ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದರೂ, ವೈರಲ್ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ಇತ್ತೀಚಿನ ವರದಿಗಳು ನಮಗೆ ಕಂಡುಬಂದಿಲ್ಲ. ಹಳೆಯ ಘಟನೆಯ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಇತ್ತೀಚೆಗೆ ಹಂಚಿಕೊಳ್ಳಲಾಗಿದೆ ಎಂದು ಈ ವರದಿಗಳು ಸ್ಪಷ್ಟಪಡಿಸುತ್ತವೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಇದು ಸೆಪ್ಟೆಂಬರ್ ೧೪, ೨೦೨೦ ರಂದು ಕರ್ನಾಟಕದ ಬೆಂಗಳೂರಿನ ಕೆ ಎಸ್ ಆರ್ ರೈಲು ನಿಲ್ದಾಣದಲ್ಲಿ ನಡೆದ ಘಟನೆ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ಕರ್ನಾಟಕದಲ್ಲಿ ಇತ್ತೀಚೆಗೆ ಹಿಂದಿ ಸೈನ್‌ಬೋರ್ಡ್ ಅನ್ನು ಧ್ವಂಸಗೊಳಿಸಿರುವುದನ್ನು ದೃಶ್ಯವು ತೋರಿಸುತ್ತದೆ ಎಂಬ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ.