ಆಂಧ್ರಪ್ರದೇಶದ ದರ್ಗಾವನ್ನು ಕೆಡವಲು ಯತ್ನಿಸಿದ ದುಷ್ಕರ್ಮಿಗಳ ಹಳೆಯ ವೀಡಿಯೋವನ್ನು ಕೇರಳದ ಇತ್ತೀಚಿನ ವೀಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳು ಕೇರಳದಲ್ಲಿ ಹಿಂದೂ ದೇವಾಲಯವನ್ನು ಕೆಡವಿದ್ದಾರೆ ಎಂದು ಹೇಳಿಕೊಂಡು ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ ಈ ವೀಡಿಯೋ ಅಕ್ಟೋಬರ್ ೧೨, ೨೦೨೨ ರಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಘಟನೆಯದ್ದು. ಅಲ್ಲಿ ದುಷ್ಕರ್ಮಿಗಳು ದರ್ಗಾವನ್ನು ಕೆಡವಲು ಪ್ರಯತ್ನಿಸಿದ್ದರು. ಹಾಗಾಗಿ ಕೇರಳದ ಇತ್ತೀಚಿನ ಘಟನೆಯನ್ನು ವೀಡಿಯೋ ತೋರಿಸುತ್ತದೆ ಎಂಬ ಆರೋಪಗಳು ತಪ್ಪು.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿನ ಬಳಕೆದಾರರು ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳು ಸುತ್ತಿಗೆಯಿಂದ ಕಮಾನಿನಂತಹ ಕಟ್ಟಡವನ್ನು ಕೆಡವಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಆ ವೀಡಿಯೋದ ಶೀರ್ಷಿಕೆಯು ಕೇರಳದಲ್ಲಿ ಹಿಂದೂ ದೇವಾಲಯವನ್ನು ಮುಸ್ಲಿಮರು ಕೆಡವುತ್ತಿರುವುದನ್ನು ತೋರಿಸುತ್ತದೆ ಮತ್ತು ಶೀಘ್ರದಲ್ಲೇ ಕರ್ನಾಟಕದಲ್ಲಿ ಇದೇ ರೀತಿಯ ಘಟನೆಗಳು ಸಂಭವಿಸಲಿದೆ ಎಂದು ಹೇಳಿಕೊಂಡಿದೆ. ಎಕ್ಸ್ ಬಳಕೆದಾರರು ಜುಲೈ ೧, ೨೦೨೪ ರಂದು ವೀಡಿಯೋವನ್ನು ಹಿಂದಿ ಶೀರ್ಷಿಕೆಯೊಂದಿಗೆ ಹೀಗೆ ಹೇಳಿಕೊಂಡು ಹಂಚಿಕೊಂಡಿದ್ದಾರೆ, "ಕೇರಳದಲ್ಲಿ ಇದು ಹಿಂದೂಗಳು ತಮ್ಮ ದೇವಸ್ಥಾನಗಳನ್ನು ಉಳಿಸಲು ಸಾಧ್ಯವಾಗದ ಪರಿಸ್ಥಿತಿ, ಮುಂದೆ ಕರ್ನಾಟಕ. ಸೆಕ್ಯುಲರ್ ಹಿಂದೂಗಳು ನಿದ್ರಿಸುತ್ತಿರಿ ಮತ್ತು ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸುತ್ತಾ ಇರಿ ಮತ್ತು ನಿಮ್ಮ ನಗರದಲ್ಲಿ ಅವರಿಗಾಗಿ ಕಾಯಿರಿ (ಅನುವಾದಿಸಲಾಗಿದೆ)." ಈ ಪೋಷ್ಟ್ ೬,೫೧,೨೦೦ ವೀಕ್ಷಣೆಗಳು, ೧೩,೦೦೦ ಇಷ್ಟಗಳು ಮತ್ತು ೯,೬೦೦ ಮರುಪೋಷ್ಟ್ ಗಳನ್ನು ಗಳಿಸಿದೆ.
ಕೇರಳದ ಹಿಂದೂ ದೇವಾಲಯವನ್ನು ಕೆಡವಿರುವುದನ್ನು ತೋರಿಸುತ್ತದೆ ಎಂದು ಎಕ್ಸ್‌ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋದ ಸ್ಕ್ರೀನ್‌ಶಾಟ್.
೪೨.೫ ಅನುಯಾಯಿಗಳಿರುವ ಮತ್ತೊಬ್ಬ ಎಕ್ಸ್ ಬಳಕೆದಾರರು ಜೂನ್ ೨೩, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಹ ಇದೇ ವೀಡಿಯೋವನ್ನುಹಂಚಿಕೊಂಡಿದ್ದಾರೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ).
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಮತ್ತು ಇದು ವೈರಲ್ ವೀಡಿಯೋದ ದೃಶ್ಯಗಳನ್ನು ಹೊಂದಿರುವ ಅಕ್ಟೋಬರ್ ೧೬, ೨೦೨೨ ರ ಜೀ ನ್ಯೂಸ್ ವರದಿಗೆ ನಮ್ಮನ್ನು ಕರೆದೊಯ್ಯಿತು. ವರದಿಯ ಮುಖ್ಯಾಂಶ, "ಗುಂಟೂರು: ದರ್ಗಾ ಕೆಡವಲು ಯತ್ನ (ಅನುವಾದಿಸಲಾಗಿದೆ)." ಎಂದು ಹೇಳುತ್ತದೆ.
ಅಕ್ಟೋಬರ್ ೧೬, ೨೦೨೨ ರಂದು ಪ್ರಕಟವಾದ ಜೀ ನ್ಯೂಸ್ ವರದಿಯ ಸ್ಕ್ರೀನ್‌ಶಾಟ್.
ವೀಡಿಯೋ ಆಂಧ್ರಪ್ರದೇಶದ ಗುಂಟೂರಿನಿಂದ ಬಂದಿದೆ ಎಂದು ವರದಿ ಸೂಚಿಸುತ್ತದೆ. ಇದರಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು "ಗುಂಟೂರು," "ದರ್ಗಾ," ಮತ್ತು "ಡೆಮಾಲಿಶ್" ನಂತಹ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದ್ದೇವೆ. ಅದು ನಮ್ಮನ್ನು ಅಕ್ಟೋಬರ್ ೧೮, ೨೦೨೨ ರ ಇಂಡಿಯಾ ಟುಡೇ ವರದಿಗೆ ಕರೆದೊಯ್ಯಿತು. ವರದಿಯು ವೈರಲ್ ವೀಡಿಯೋದ ಕೀಫ್ರೇಮ್ ಅನ್ನು ಒಳಗೊಂಡಿದೆ.
ಅಕ್ಟೋಬರ್ ೧೮, ೨೦೨೨ ರ ಇಂಡಿಯಾ ಟುಡೇ ವರದಿಯ ಸ್ಕ್ರೀನ್‌ಶಾಟ್.
ವರದಿಯ ಪ್ರಕಾರ, ಅಕ್ಟೋಬರ್ ೧೨, ೨೦೨೨ ರಂದು, ಗುಂಟೂರಿನ ಎಲ್‌ಬಿ ನಗರದಲ್ಲಿ ಮಸೀದಿ ನಿರ್ಮಿಸಲು ಕೆಲವು ಪುರುಷರು ದರ್ಗಾವನ್ನು ಕೆಡವಲು ಪ್ರಯತ್ನಿಸಿದಾಗ, ಸ್ಥಳೀಯರು ಮಧ್ಯಪ್ರವೇಶಿಸಿ ಅವರನ್ನು ತಡೆದರು. ದರ್ಗಾ ಕೆಡವಿರುವುದನ್ನು ಸ್ಥಳೀಯರು ಪ್ರತಿಭಟಿಸಿದ್ದರಿಂದ ಉದ್ವಿಗ್ನತೆ ಉಂಟಾಯಿತು.
ಇತರ ಸುದ್ದಿ ಮಾಧ್ಯಮಗಳಾದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ಘಟನೆಯನ್ನು ವರದಿ ಮಾಡಿದೆ. ಕೇರಳದಲ್ಲಿ ಹಿಂದೂ ದೇವಾಲಯವನ್ನು ಕೆಡವುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುವುದಿಲ್ಲ ಎಂದು ಈ ವರದಿಗಳು ಸ್ಪಷ್ಟಪಡಿಸುತ್ತವೆ.
ತೀರ್ಪು:
ಆಂಧ್ರಪ್ರದೇಶದ ಗುಂಟೂರಿನಲ್ಲಿ ಅಕ್ಟೋಬರ್ ೧೨, ೨೦೨೨ ರಂದು ಮಸೀದಿ ನಿರ್ಮಿಸಲು ದುಷ್ಕರ್ಮಿಗಳು ದರ್ಗಾವನ್ನು ಕೆಡವಲು ಯತ್ನಿಸಿದ ಘಟನೆಯನ್ನು ಇದು ತೋರಿಸುತ್ತದೆ ಎಂದು ವೀಡಿಯೋದ ವಿಶ್ಲೇಷಣೆಯು ಬಹಿರಂಗಪಡಿಸುತ್ತದೆ. ಆದ್ದರಿಂದ, ಕೇರಳದ ಇತ್ತೀಚಿನ ಘಟನೆಯನ್ನು ವೀಡಿಯೋ ತೋರಿಸುತ್ತದೆ ಎಂಬ ಆರೋಪಗಳು ತಪ್ಪು.