"೨೦ ಲಕ್ಷ ಕಾಣೆಯಾದ ಇವಿಎಂಗಳ" ಕುರಿತು ತೆಲುಗು ಪತ್ರಿಕೆಯ ಸಂಪಾದಕರ ಹೇಳಿಕೆಯ ಹಳೆಯ ವೀಡಿಯೋವನ್ನು ಇತ್ತೀಚಿನದೆಂದು ಹಂಚಿಕೊಳ್ಳಲಾಗಿದೆ
ಸಾರಾಂಶ:
ನವ ತೆಲಂಗಾಣ ತೆಲುಗು ಪತ್ರಿಕೆಯ ಸಂಪಾದಕರು ೨೦ ಲಕ್ಷ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ನಾಪತ್ತೆಯಾಗಿದೆ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಅವುಗಳ ಬಗ್ಗೆ ತಿಳಿದಿಲ್ಲದ ಬಗ್ಗೆ ಮಾತನಾಡುತ್ತಿರುವ ವೀಡಿಯೋ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಇದು ೨೦೧೯ ರ ವೀಡಿಯೋವಾಗಿದೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ೨೦೨೪ ರ ಲೋಕಸಭಾ ಚುನಾವಣೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದು ಈ ಹೇಳಿಕೆಯನ್ನು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.
ಹೇಳಿಕೆ:
೨೦೨೪ ರ ಆಂಧ್ರಪ್ರದೇಶ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿಕೂಟ ವೈಎಸ್‌ಆರ್‌ಸಿಪಿಯನ್ನು ಸೋಲಿಸಿತು. ಇದರ ಪರಿಣಾಮವಾಗಿ, ವೈಎಸ್‌ಆರ್‌ಸಿಪಿ ಸರ್ಕಾರ ರಚಿಸುವ ಅವಕಾಶವನ್ನು ಕಳೆದುಕೊಂಡಿತು ಮತ್ತು ಇತರ ಪಕ್ಷಗಳಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿತು. ಇದರ ಮಧ್ಯೆ, ತೆಲುಗು ದಿನಪತ್ರಿಕೆ ನವ ತೆಲಂಗಾಣದ ಮುಖ್ಯ ಸಂಪಾದಕ ಎಸ್ ವೀರಯ್ಯ ಅವರು ಮಾಡಿದ ಟೀಕೆಗಳನ್ನು ಒಳಗೊಂಡಿರುವ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಭಾರತದಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ನಿರ್ದಿಷ್ಟವಾಗಿ ಇವಿಎಂಗಳ ಬಳಕೆಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ ಎಂದು ವೀರಯ್ಯ ಅವರು ವೀಡಿಯೋದಲ್ಲಿ ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ೬೦ ಲಕ್ಷ ಇವಿಎಂಗಳನ್ನು ಉತ್ಪಾದಿಸಲಾಗಿದ್ದರೂ, ೨೦ ಲಕ್ಷ ನಾಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. "ಕಾಣೆಯಾದ ಇವಿಎಂಗಳು" ಇಸಿಐಗೆ ತಿಳಿದಿಲ್ಲ ಎಂದು ಅವರು ಪ್ರತಿಪಾದಿಸಿದರು. ಎನ್‌ಡಿಎ ಸರ್ಕಾರವು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಯಂತ್ರಗಳನ್ನು ಬಳಸಿರಬಹುದು ಎಂದು ಅವರು ಪರೋಕ್ಷವಾಗಿ ಸೂಚಿಸಿದ್ದಾರೆ.
ಜೂನ್ ೫, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೀಡಿಯೋ ಹಳೆಯದಾಗಿದೆ ಮತ್ತು ೨೦೨೪ ರ ಲೋಕಸಭಾ ಚುನಾವಣೆಗೆ ಸಂಬಂಧ ಹೊಂದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೋದ ಕುರಿತು ನಮ್ಮ ತನಿಖೆಯು ಜೂನ್ ೧೨, ೨೦೧೯ ರಂದು ವೀರಯ್ಯ ಅವರ ಎಕ್ಸ್ ಪೋಷ್ಟ್ ಗೆ ಕರೆದೊಯ್ಯಿತು, ಇದೊಂದು ಯೂಟ್ಯೂಬ್ ಲಿಂಕ್ ಅನ್ನು ಒಳಗೊಂಡಿದೆ. ೭ ನಿಮಿಷಗಳ ೪೬ ಸೆಕೆಂಡ್ ಅವಧಿಯ ವೀಡಿಯೋದ ಶೀರ್ಷಿಕೆ ಹೀಗಿದೆ - “ಸಂಸತ್ ಚುನಾವಣೆಯಲ್ಲಿ ಕಾಣೆಯಾಗಿದ್ದ ೨೦ ಲಕ್ಷ ಇವಿಎಂಗಳು ಎಲ್ಲಿವೆ? ಎಸ್ ವೀರಯ್ಯ ವಿಶ್ಲೇಷಣೆ” (ಅನುವಾದಿಸಲಾಗಿದೆ). ಇದನ್ನು ಜೂನ್ ೧೨, ೨೦೧೯ ರಂದು ಅಪ್‌ಲೋಡ್ ಮಾಡಲಾಗಿದೆ.
ಜೂನ್ ೧೨, ೨೦೧೯ ರಂದು ಯೂಟ್ಯೂಬ್ ಗೆ ಅಪ್‌ಲೋಡ್ ಮಾಡಲಾದ ವೀರಯ್ಯ ಅವರ ಮೂಲ ವೀಡಿಯೋದ ಸ್ಕ್ರೀನ್‌ಶಾಟ್.
ವೈರಲ್ ಕ್ಲಿಪ್ ಅನ್ನು ಯೂಟ್ಯೂಬ್ ವೀಡಿಯೋದಲ್ಲಿ ೧:೧೦ ನಿಮಿಷಗಳ ಅವಧಿಯಲ್ಲಿ ಕಾಣಬಹುದು. ಪೂರ್ಣ ವೀಡಿಯೋದಲ್ಲಿ, ಕೆಲವು ಮತ ಎಣಿಕೆ ಕೇಂದ್ರಗಳಲ್ಲಿ ಮತ ಚಲಾಯಿಸಿದ ಮತಗಳು ಮತ್ತು ಎಣಿಕೆಯಾದ ಮತಗಳ ನಡುವಿನ ವ್ಯತ್ಯಾಸಗಳು ಸೇರಿದಂತೆ ಇವಿಎಂಗಳಿಗೆ ಸಂಬಂಧಿಸಿದ ವ್ಯತ್ಯಾಸಗಳ ಬಗ್ಗೆ ಇಸಿಐ ಮೌನವಾಗಿರುವ ಬಗ್ಗೆ ವೀರಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಗುಜರಾತಿನ ಮತಗಟ್ಟೆಯೊಂದರಲ್ಲಿ ಎಣಿಕೆ ವ್ಯತ್ಯಾಸವು ಗಮನಾರ್ಹವಾದ ಒಂದು ಲಕ್ಷ ಮತಗಳನ್ನು ತಲುಪಿದೆ ಎಂದು ವೀರಯ್ಯ ನಿರ್ದಿಷ್ಟವಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಆರೋಪಗಳನ್ನು ಬೆಂಬಲಿಸಲು ಅವರು ಗಣನೀಯ ಸಾಕ್ಷ್ಯವನ್ನು ನೀಡುವುದಿಲ್ಲ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಹಳೆಯ ವೀಡಿಯೋವನ್ನು ಸಂದರ್ಭದಿಂದ ಹಂಚಿಕೊಳ್ಳಲಾಗಿದೆ ಎಂದು ಬಹಿರಂಗಪಡಿಸುತ್ತದೆ. ನವ ತೆಲಂಗಾಣದ ಸಂಪಾದಕರು ೨೦೧೯ ರಲ್ಲಿ ಇವಿಎಂಗಳು ನಾಪತ್ತೆಯಾಗಿರುವ ಬಗ್ಗೆ ಆಪಾದಿಸಿದ್ದು, ಇತ್ತೀಚಿನ ಚುನಾವಣೆಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.