Begin typing your search above and press return to search.
    Others

    ಉತ್ತರ ಪ್ರದೇಶದ ಜನಸಂಖ್ಯೆ ನಿಯಂತ್ರಣ ಮಸೂದೆಯ ಹಳೆಯ ವೀಡಿಯೋವನ್ನು ಇತ್ತೀಚಿನದ್ದೆಂದು ಹಂಚಿಕೊಳ್ಳಲಾಗಿದೆ

    IDTU - Karnataka
    11 Jun 2024 8:30 AM GMT
    ಉತ್ತರ ಪ್ರದೇಶದ ಜನಸಂಖ್ಯೆ ನಿಯಂತ್ರಣ ಮಸೂದೆಯ ಹಳೆಯ ವೀಡಿಯೋವನ್ನು ಇತ್ತೀಚಿನದ್ದೆಂದು ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ಉತ್ತರ ಪ್ರದೇಶದಲ್ಲಿ (ಯುಪಿ) ಜನಸಂಖ್ಯಾ ನಿಯಂತ್ರಣ ಮಸೂದೆಗೆ ಸಂಬಂಧಿಸಿದ ಸುದ್ದಿ ವರದಿಯ ವೀಡಿಯೋ ಕ್ಲಿಪ್ ಅನ್ನು ಜೂನ್ ೨೦೨೪ ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಈ ವೀಡಿಯೋ ೨೦೨೧ ರದ್ದು, ಮತ್ತು ಉತ್ತರ ಪ್ರದೇಶ ಸರ್ಕಾರವು ಮಸೂದೆಯನ್ನು ಅಂಗೀಕರಿಸಿರುವ ಬಗ್ಗೆ ಯಾವುದೇ ಇತ್ತೀಚಿನ ವರದಿಗಳಿಲ್ಲ. ಈ ಹಳೆಯ ವೀಡಿಯೋವನ್ನು ತಪ್ಪಾದ ಸಂದರ್ಭದೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ತಪ್ಪುದಾರಿಗೆಳೆಯುವಂತಿದೆ.


    ಹೇಳಿಕೆ:

    ಸಾಮಾಜಿಕ ಮಾಧ್ಯಮ ಬಳಕೆದಾರರು ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆ ಕುರಿತು ಸುದ್ದಿ ವರದಿಯ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ ಮತ್ತು ಈ ಪೋಷ್ಟ್ ಗಳಲ್ಲಿ ಕೆಲವು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಎರಡು ಮಕ್ಕಳ ನೀತಿಯನ್ನು ಜಾರಿಗೆ ತಂದಿದ್ದಕ್ಕಾಗಿ ಪ್ರಶಂಸಿಸಿದ್ದಾರೆ. ಹಿಂದಿಯಲ್ಲಿ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಯೋಗಿ ಜಿ ಅವರಿಗೆ ಅನೇಕ ನಮಸ್ಕಾರಗಳು. ಚುನಾವಣೆ ಇನ್ನೂ ಮುಗಿದಿಲ್ಲ, ಈ ಮಹಾನ್ ನಾಯಕ ತನ್ನ ಮ್ಯಾಜಿಕ್ ತೋರಿಸಲು ಪ್ರಾರಂಭಿಸಿದ್ದಾನೆ. ವರ್ಷಗಳ ಕಾಯುವಿಕೆ ಮುಗಿದಿದೆ. ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳ ಕಾನೂನನ್ನು ಜಾರಿಗೆ ತರಲಾಗಿದೆ (ಅನುವಾದಿಸಲಾಗಿದೆ)." ಜೂನ್ ೬, ೨೦೨೪ ರಂದು ಹಂಚಿಕೊಳ್ಳಲಾದ ಈ ಪೋಷ್ಟ್ ಅನ್ನು ಹಂಚಿಕೊಂಡಾಗಿನಿಂದ ೧೦೦,೦೦೦ ವೀಕ್ಷಣೆಗಳನ್ನು ಗಳಿಸಿದೆ.

    ವೈರಲ್ ವೀಡಿಯೋದೊಂದಿಗೆ ಕಂಡುಬಂದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ನಾವು ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯ ಕುರಿತಾದ ಸುದ್ದಿ ವರದಿಗಳಿಗಾಗಿ ಹುಡುಕಿದೆವು ಮತ್ತು ಯುಪಿ ರಾಜ್ಯ ಕಾನೂನು ಆಯೋಗವು ಜುಲೈ ೨೦೨೧ ರಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ರಚಿಸಿದೆ ಎಂದು ಹೇಳುವ ಹಲವಾರು ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಆಗಸ್ಟ್ ೧೭, ೨೦೨೧ ರ ದಿನಾಂಕದ ದಿ ಎಕನಾಮಿಕ್ ಟೈಮ್ಸ್ ನ ಅಂತಹ ಒಂದು ಸುದ್ದಿ ವರದಿ, ಜನಸಂಖ್ಯಾ ನಿಯಂತ್ರಣ ಮಸೂದೆಯ ಶಿಫಾರಸುಗಳನ್ನು ಜನಸಂಖ್ಯಾ ನಿಯಂತ್ರಣ ಸ್ಥಿರೀಕರಣ ಮತ್ತು ಕಲ್ಯಾಣ ಕುರಿತ ಉತ್ತರ ಪ್ರದೇಶದ ಕಾನೂನು ಆಯೋಗದ ೧೯ ನೇ ರಿಪೋರ್ಟ್ ನಲ್ಲಿ ಮಾಡಲಾಗಿದೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಗಮನಿಸಿದರು.

    ದಿ ಎಕನಾಮಿಕ್ ಟೈಮ್ಸ್‌ನ ೨೦೨೧ ರ ಸುದ್ದಿ ಲೇಖನದ ಸ್ಕ್ರೀನ್‌ಶಾಟ್.


    ಆದರೆ, ಈ ಮಸೂದೆಯನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡಿಸಲಾಗಿದೆ ಅಥವಾ ಅಂಗೀಕರಿಸಲಾಗಿದೆ ಎಂದು ಹೇಳುವ ಯಾವುದೇ ಸುದ್ದಿ ವರದಿಗಳು (ಇತ್ತೀಚಿನ ಅಥವಾ ಹಳೆಯದು) ನಮಗೆ ಕಂಡುಬಂದಿಲ್ಲ. ಮಸೂದೆಯ ಪ್ರಸ್ತುತ ಸ್ಥಿತಿಯ ಕುರಿತು ಉತ್ತರ ಪ್ರದೇಶದ ಅಧಿಕಾರಿಗಳು ಅಥವಾ ಮುಖ್ಯಮಂತ್ರಿಯವರ ಕಚೇರಿಯಿಂದ ಯಾವುದೇ ಅಧಿಕೃತ ಹೇಳಿಕೆಗಳಿಲ್ಲ.

    ಇದಲ್ಲದೆ, ಈಗ ವೈರಲ್ ಆಗಿರುವ ವೀಡಿಯೋದ ಮೂಲವನ್ನು ಹುಡುಕಲು, ಅದರ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಜುಲೈ ೧೧, ೨೦೨೧ ರಂದು ರಿಪಬ್ಲಿಕ್ ಭಾರತ್ ಹಂಚಿಕೊಂಡ ಯೂಟ್ಯೂಬ್ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಹಿಂದಿಯಲ್ಲಿರುವ ಈ ವೀಡಿಯೋದ ಶೀರ್ಷಿಕೆ ಹೀಗಿದೆ, “ಜನಸಂಖ್ಯಾ ನಿಯಂತ್ರಣ ಸೂತ್ರ ರೂಪಿಸಿದ ಯೋಗಿ! | ಸೈಯದ್ ಸುಹೇಲ್ ಅವರೊಂದಿಗೆ ಯೇ ಭಾರತ್ ಕೀ ಬಾತ್ ಹೈ ವೀಕ್ಷಿಸಿ (ಅನುವಾದಿಸಲಾಗಿದೆ)." ಇದು ಈ ವೀಡಿಯೋ ಇತ್ತೀಚಿನದಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಯುಪಿ ಕಾನೂನು ಆಯೋಗವು ಯುಪಿ ಸರ್ಕಾರಕ್ಕೆ ಜನಸಂಖ್ಯೆ ನಿಯಂತ್ರಣ ಮಸೂದೆಯ ಕುರಿತು ಶಿಫಾರಸುಗಳನ್ನು ಮಾಡಿದಾಗ ೨೦೨೧ ರಲ್ಲಿ ಕಂಡುಬಂದ ಸುದ್ದಿ ವರದಿಯ ವೀಡಿಯೋ ಇದು.

    ಜುಲೈ ೧೧, ೨೦೨೧ ರಂದು ರಿಪಬ್ಲಿಕ್ ಭಾರತ್ ಯೂಟ್ಯೂಬ್ ನಲ್ಲಿ ಹಂಚಿಕೊಂಡ ಸುದ್ದಿ ವರದಿಯ ಸ್ಕ್ರೀನ್‌ಶಾಟ್.


    ಎರಡು ಮಕ್ಕಳ ನೀತಿಯನ್ನು ಉತ್ತೇಜಿಸುವ ಮಸೂದೆಯನ್ನು ಯುಪಿ ಸರ್ಕಾರವು ಅಂಗೀಕರಿಸಿದೆ ಎಂದು ವ್ಯಾಪಕವಾಗಿ ಪ್ರಸಾರವಾದ ಈ ವೀಡಿಯೋ ಹೇಳುತ್ತದೆ. ಆದರೆ, ಯಾವುದೇ ಇತ್ತೀಚಿನ ಸುದ್ದಿ ವರದಿಗಳು ಅಥವಾ ಅಧಿಕೃತ ಹೇಳಿಕೆಗಳು ಈ ಮಸೂದೆಯನ್ನು ಅಂಗೀಕರಿಸಿರುವುದಾಗಿ ಧೃಡೀಕರಿಸಿಲ್ಲ. ಹೀಗಾಗಿ, ಉತ್ತರ ಪ್ರದೇಶವು ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಅಂಗೀಕರಿಸಿದೆ ಎಂದು ತೋರಿಸಲು ೨೦೨೧ ರ ಸುದ್ದಿ ವರದಿಯ ವೀಡಿಯೋ ಕ್ಲಿಪ್ ಅನ್ನು ತಪ್ಪಾದ ಸಂದರ್ಭದಲ್ಲಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.


    ತೀರ್ಪು:

    ಯುಪಿಯಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ತೋರಿಸಲು ಉದ್ದೇಶಿಸಿರುವ ವೀಡಿಯೋ ಜುಲೈ ೨೦೨೧ ರದ್ದು, ಮತ್ತು ಯುಪಿ ಕಾನೂನು ಆಯೋಗವು ಜನಸಂಖ್ಯಾ ನಿಯಂತ್ರಣ ಮಸೂದೆಗೆ ಶಿಫಾರಸುಗಳನ್ನು ಮಾಡಿದ ಸುದ್ದಿ ವರದಿಯದ್ದಾಗಿದೆ. ಆದರೆ, ಈ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಿಲ್ಲ. ಈ ಹಳೆಯ ವೀಡಿಯೋವನ್ನು ತಪ್ಪಾಗಿ ಜನಸಾಮಾನ್ಯರನ್ನು ದಾರಿತಪ್ಪಿಸುವ ಉದ್ದೇಶದಿಂದ ಹಂಚಿಕೊಳ್ಳಲಾಗಿದೆ.

    Claim Review :   Old video of Uttar Pradesh population control bill shared as recent
    Claimed By :  X user
    Fact Check :  Misleading
    IDTU - Karnataka

    IDTU - Karnataka