ಬಾಂಗ್ಲಾದೇಶದ ನಟಿಯನ್ನು ಸಾರ್ವಜನಿಕವಾಗಿ ಕೀಟಲೆ ಮಾಡುವ ವೀಡಿಯೋವನ್ನು ಹಿಜಾಬ್ ಧರಿಸದಿದ್ದಕ್ಕಾಗಿ ಅಮೇರಿಕನ್ ಮಹಿಳೆಯನ್ನು ಥಳಿಸುವ ವೀಡಿಯೋ ಎಂದು ಹಂಚಿಕೊಳ್ಳಲಾಗಿದೆ
ಸಾರಾಂಶ:
ಹಿಜಾಬ್ ಧರಿಸದಿದ್ದಕ್ಕಾಗಿ ಬಾಂಗ್ಲಾದೇಶದ ಜನರು ಅಮೇರಿಕನ್ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಸಾರ್ವಜನಿಕವಾಗಿ ಮಹಿಳೆಯೊಬ್ಬರನ್ನು ಮಕ್ಕಳು ಪೀಡಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ಬಾಂಗ್ಲಾದೇಶದ ನಟಿಯೊಬ್ಬರು ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹುಟ್ಟುಹಬ್ಬದ ಆಚರಣೆಯಾಗಿ ಸಾರ್ವಜನಿಕವಾಗಿ ಕೇಕ್ ಹಂಚಿಕೊಳ್ಳಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ, ಇದು ಸಾರ್ವಜನಿಕರನ್ನು ಕೆರಳಿಸಿತು. ಘಟನೆಯಲ್ಲಿ ಅಮೆರಿಕದ ಯಾವುದೇ ಮಹಿಳೆ ಭಾಗಿಯಾಗಿಲ್ಲ. ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಸೆಪ್ಟೆಂಬರ್ ೩೦, ೨೦೨೪ ರಂದು, ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಸಾರ್ವಜನಿಕವಾಗಿ ಮಕ್ಕಳಿಂದ ಪೀಡಿತ, ಪ್ಲೇಟ್ ಹಿಡಿದುಕೊಂಡು ರಿಕ್ಷಾದಲ್ಲಿ ಕುಳಿತಿರುವ ಮಹಿಳೆಯ ೨೦-ಸೆಕೆಂಡುಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಜಾಬ್ ಧರಿಸದ ಕಾರಣ ದಾಳಿಗೊಳಗಾದ ಅಮೆರಿಕದ ಮಹಿಳೆಯನ್ನು ವೀಡಿಯೋ ತೋರಿಸುತ್ತದೆ ಎಂದು ಕ್ಲಿಪ್‌ನೊಂದಿಗೆ ಹಂಚಿಕೊಂಡ ಶೀರ್ಷಿಕೆ ಹೇಳುತ್ತದೆ. ಶೀರ್ಷಿಕೆಯು "ಹಿಜಾಬ್ ಧರಿಸದಿದ್ದಕ್ಕಾಗಿ ಬಾಂಗ್ಲಾದೇಶಿಗಳಿಂದ ಅಮೇರಿಕನ್ ಮಹಿಳೆಗೆ ಕಿರುಕುಳ ನೀಡಲಾಗುತ್ತದೆ. ನೊಬೆಲ್ ಪ್ರಶಸ್ತಿ ವಿಜೇತ ಯೂನಸ್ ಅವರ ನಾಯಕತ್ವದಲ್ಲಿ ಮುಕ್ತ ಬಾಂಗ್ಲಾದೇಶವು ಹೇಗೆ ಕಾಣುತ್ತದೆ - ಇದು ಜಾಗತಿಕ ಅವಮಾನ” (ಅನುವಾದಿಸಲಾಗಿದೆ). ಫೇಸ್‌ಬುಕ್ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಯೊಂದಿಗೆ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಸ್ಥಾನದಿಂದ ಹೊರಹಾಕಿದ ನಂತರ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರನ್ನು ಬಾಂಗ್ಲಾದೇಶ ಸರ್ಕಾರದ ಮಧ್ಯಂತರ ನಾಯಕರಾಗಿ ಆಯ್ಕೆ ಮಾಡಲಾಯಿತು.
ಸೆಪ್ಟೆಂಬರ್ ೩೦, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಬಾಂಗ್ಲಾದೇಶದ ಸುದ್ದಿ ಮಾಧ್ಯಮವಾದ ದೇಶ್ ಬೈಚಿತ್ರ ಸೆಪ್ಟೆಂಬರ್ ೩೦, ೨೦೨೪ ರಂದು ಯೂಟ್ಯೂಬ್ ನಲ್ಲಿ ಹಂಚಿಕೊಂಡ ವೈರಲ್ ಕ್ಲಿಪ್‌ನ (೧ ನಿಮಿಷದ ಉದ್ದ) ದೀರ್ಘವಾದ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಅದರ ಬಾಂಗ್ಲಾ ಶೀರ್ಷಿಕೆಯು ಹೀಗೆ ಹೇಳುತ್ತದೆ, “ಒಬ್ಬ ಮಹಿಳೆ ಶೇಖ್ ಹಸೀನಾ ಅವರ ಜನ್ಮದಿನವನ್ನು ಆಚರಿಸುವಾಗ "ವೈರಲ್" ಆದರು #deshbaichitra #news ವೈರಲ್" (ಅನುವಾದಿಸಲಾಗಿದೆ). ಅದೇ ರೀತಿ ಅಕ್ಟೋಬರ್ ೧, ೨೦೨೪ ರಂದು ಟೈಮ್ಸ್ ನೌ ಫೇಸ್‌ಬುಕ್‌ನಲ್ಲಿ ವೈರಲ್ ಕ್ಲಿಪ್ ಅನ್ನು ಈ
ಶೀರ್ಷಿಕೆಯಾಂದಿಗೆ ಹಂಚಿಕೊಂಡಿದೆ, "ನಟಿ ಮಿಶ್ತಿ ಸುಬಾಸ್ ಮತ್ತು ಶೇಖ್ ಹಸೀನಾ ಅವರ ಬೆಂಬಲಿಗರು ಬಾಂಗ್ಲಾದೇಶದಲ್ಲಿ ಕೇಕ್ ಕತ್ತರಿಸುವ ಮೂಲಕ ಶೇಖ್ ಹಸೀನಾ ಅವರ ಜನ್ಮದಿನವನ್ನು ಆಚರಿಸಿದ್ದಕ್ಕಾಗಿ ಕಿರುಕುಳ ನೀಡಿದ್ದಾರೆ" (ಅನುವಾದಿಸಲಾಗಿದೆ).
ಸೆಪ್ಟೆಂಬರ್ ೩೦, ೨೦೨೪ ರಂದು ಅಪ್‌ಲೋಡ್ ಮಾಡಿದ ದೇಶ್ ಬೈಚಿತ್ರ ಅವರ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಈ ಘಟನೆಯು ಸೆಪ್ಟೆಂಬರ್ ೩೦, ೨೦೨೪ ರಂದು ಸಂಭವಿಸಿದೆ ಎಂದು ತಿಳಿಸುವ ದಿ ರಿಪೋರ್ಟ್ ಹೆಸರಿನ ಬಾಂಗ್ಲಾದೇಶದ ಸುದ್ದಿ ವೆಬ್‌ಸೈಟ್‌ನ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ವರದಿಯ ಪ್ರಕಾರ, ಬಂಗ್ಮಾತಾ ಸಾಂಸ್ಕೃತಿಕ ಒಕ್ಕೂಟದ ನಾಯಕಿ ಮತ್ತು ನಟಿ ಮತ್ತು ರೂಪದರ್ಶಿ ಮಿಶ್ತಿ ಸುಬಾಸ್ ಅವರು ಕೇಕ್‌ನೊಂದಿಗೆ ಢಾಕಾ ವಿಶ್ವವಿದ್ಯಾಲಯದ ಶಿಕ್ಷಕ-ವಿದ್ಯಾರ್ಥಿ ಮಂಡಳಿಯಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿಯವರ ಜನ್ಮದಿನವನ್ನು ಆಚರಿಸಲು ಕಾಣಿಸಿಕೊಂಡರು. ಶೇಖ್ ಹಸೀನಾ ದೇಶ ತೊರೆಯುವಂತೆ ಮಾಡಲು ಸಂಚು ರೂಪಿಸಲಾಗಿತ್ತೆಂದು ಹೇಳಿಕೊಂಡು, ಒಂದು ತಿಂಗಳ ಕಾಲ ತನ್ನ ನಾಯಕನ ಹುಟ್ಟುಹಬ್ಬವನ್ನು ಆಚರಿಸುವುದಾಗಿ ನಟಿ ಹೇಳಿಕೊಂಡಿದ್ದಾರೆ. ರಸ್ತೆಯಲ್ಲಿದ್ದ ಮಕ್ಕಳಿಗೆ ಕೇಕ್ ಹಂಚಲು ಹೋದಾಗ ಘೋಷಣೆಗಳನ್ನು ಕೂಗಿ ಆಕೆಗೆ ಕೀಟಲೆ ಮಾಡಿದ್ದಾರೆ, ಅದನ್ನು ವೈರಲ್ ವೀಡಿಯೋದಲ್ಲಿ ತೋರಿಸಲಾಗಿದೆ.
ಸೆಪ್ಟೆಂಬರ್ ೩೦, ೨೦೨೪ ರಂದು ಪ್ರಕಟವಾದ ದಿ ರಿಪೋರ್ಟ್ ನ ವರದಿಯ ಸ್ಕ್ರೀನ್‌ಶಾಟ್.
ಮತ್ತೊಂದು ಬಾಂಗ್ಲಾದೇಶದ ಸುದ್ದಿ ವೆಬ್‌ಸೈಟ್ ಆದ ಡೈಲಿ ಇಂಕಿಲಾಬ್ ಘಟನೆಯ ಬಗ್ಗೆ ಇದೇ ರೀತಿ ವರದಿ ಮಾಡಿದೆ. ಸೆಪ್ಟೆಂಬರ್ ೨೯, ೨೦೨೪ ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ ಪ್ರೊತಿದಿನೆರ್ ಬಾಂಗ್ಲಾದೇಶ್ ನ ವೀಡಿಯೋ ವರದಿಯು ಘಟನೆಯ ಬಗ್ಗೆ ನಟಿಯು ನೀಡಿದ ಪ್ರತಿಕ್ರಿಯೆಯನ್ನು ಒಳಗೊಂಡಿದೆ. ವೈರಲ್ ವೀಡಿಯೋಗೆ ಸಂಬಂಧಿಸಿದಂತೆ ಅಮೆರಿಕನ್ನರನ್ನು ಒಳಗೊಂಡ ಕೋಮು ಘಟನೆಗಳ ಬಗ್ಗೆ ಇತ್ತೀಚಿನ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಜನ್ಮದಿನದ ಆಚರಣೆಯಲ್ಲಿ ಬಾಂಗ್ಲಾದೇಶದ ನಟಿಯೊಬ್ಬರು ಬೀದಿಯಲ್ಲಿ ಮಕ್ಕಳಿಗೆ ಕೇಕ್ ವಿತರಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಇದು ಮಕ್ಕಳು ಆಕೆಯನ್ನು ಪೀಡಿಸಲು ಮತ್ತು ಆಕೆಯ ವಿರುದ್ಧ ಘೋಷಣೆಗಳನ್ನು ಕೂಗುವುದಕ್ಕೆ ಕಾರಣವಾಯಿತು. ಈ ಘಟನೆಯಲ್ಲಿ ಯಾವ ಅಮೇರಿಕನ್ ಕೂಡ ಭಾಗಿಯಾಗಿಲ್ಲ ಮತ್ತು ಯಾವ ಕೋಮು ಕಾರಣವೂ ಹೊಂದಿರಲಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪು.