ವಿಕಿಲೀಕ್ಸ್ ಬ್ರಿಟನ್ ಬ್ಯಾಂಕ್‌ಗಳಲ್ಲಿನ ಬಿಜೆಪಿ ನಾಯಕರ ಕಪ್ಪುಹಣವನ್ನು ಬಹಿರಂಗಪಡಿಸಿದೆ ಎಂಬ ವೈರಲ್ ಹೇಳಿಕೆ ತಪ್ಪು
ಸಾರಾಂಶ:
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಂದಿರುವ ಸಂದೇಶವು ವಿಕಿಲೀಕ್ಸ್ ಭಾರತೀಯ ರಾಜಕೀಯ ನಾಯಕರ ಪಟ್ಟಿಯನ್ನು ಪ್ರಕಟಿಸಿದೆ ಎಂದು ಹೇಳುತ್ತದೆ. ಮುಖ್ಯವಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಯುನೈಟೆಡ್ ಕಿಂಗ್‌ಡಮ್(ಯುಕೆ)ನ ರಹಸ್ಯ ಬ್ಯಾಂಕ್ ಖಾತೆಗಳಲ್ಲಿ ಕಪ್ಪು ಹಣವನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ವಿಕಿಲೀಕ್ಸ್ ಅಂತಹ ಯಾವುದೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ಮತ್ತು ೨೦೨೧ ರಿಂದ ಈ ರೀತಿಯ ತಪ್ಪು ಹೇಳಿಕೆಗಳು ಕಾಂಗ್ರೆಸ್ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಹರಡುತ್ತಿವೆ. ಆದ್ದರಿಂದ, ಈ ಹೇಳಿಕೆ ತಪ್ಪು.
ಹೇಳಿಕೆ:
"ಬ್ರಿಟನ್‌ನ ರಹಸ್ಯ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಹೊಂದಿರುವ ಭಾರತೀಯರ ಮೊದಲ ಪಟ್ಟಿ" ಅನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಸಂದೇಶವನ್ನು ಹಂಚಿಕೊಂಡಿದ್ದಾರೆ. ವೈರಲ್ ಪೋಷ್ಟ್ ಅನ್ನು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಈ ಪೋಷ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ೨೪ ಬಿಜೆಪಿ ನಾಯಕರು ಯುಕೆ ಬ್ಯಾಂಕ್‌ಗಳಲ್ಲಿ ಕಪ್ಪು ಹಣವನ್ನು ಠೇವಣಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂದೇಶದ ಕೆಲವು ಆವೃತ್ತಿಗಳು ಆ ಬ್ಯಾಂಕ್ ಖಾತೆಗಳಲ್ಲಿರುವ ಭಾರತೀಯ ಕಪ್ಪುಹಣದ ಒಟ್ಟು ಮೊತ್ತ ೧.೩ ಟ್ರಿಲಿಯನ್ ಡಾಲರ್‌ಗಳು ಎಂದು ಹೇಳುತ್ತದೆ.
ಜುಲೈ ೧೦, ೨೦೨೪ ರಂದು ವೈರಲ್ ಹೇಳಿಕೆಯನ್ನು ಹಂಚಿಕೊಳ್ಳುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ಹುಡುಕಾಟವು ವಿಕಿಲೀಕ್ಸ್ ಯುಕೆ ಬ್ಯಾಂಕ್‌ಗಳಲ್ಲಿ ಭಾರತೀಯ ಕಪ್ಪುಹಣ ಹೊಂದಿರುವವರ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳನ್ನು ನೀಡಲಿಲ್ಲ. ೨೦೨೧ ರಿಂದ ವಿವಿಧ ಭಾರತೀಯ ರಾಜಕೀಯ ನಾಯಕರ ಹೆಸರಿನೊಂದಿಗೆ ಇದೇ ರೀತಿಯ ಸಂದೇಶಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಸಂದೇಶದ ಹಿಂದಿನ ಆವೃತ್ತಿಗಳು ವಿಕಿಲೀಕ್ಸ್ ಸ್ವಿಸ್ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯ ರಾಜಕಾರಣಿಗಳನ್ನು ಬಹಿರಂಗಪಡಿಸಿದೆ ಎಂದು ಹೇಳಿಕೊಂಡಿವೆ.
ಗಮನಾರ್ಹವೆಂದರೆ, ಈ ಪೋಷ್ಟ್ ನ ಹಿಂದಿನ ಪುನರಾವರ್ತನೆಯು ಭಾರತೀಯ ರಾಜಕಾರಣಿಗಳಾದ ರಾಜೀವ್ ಗಾಂಧಿ, ಅಂದಿಮುತ್ತು ರಾಜಾ, ಹರ್ಷದ್ ಮೆಹ್ತಾ, ಶರದ್ ಪವಾರ್, ಪಿ. ಚಿದಂಬರಂ, ಸುರೇಶ್ ಕಲ್ಮಾಡಿ, ಮುತ್ತುವೇಲ್ ಕರುಣಾನಿಧಿ ಮತ್ತು ಇತರರು ಸ್ವಿಸ್ ಬ್ಯಾಂಕ್ ಕಾರ್ಪೊರೇಷನ್‌ನಲ್ಲಿ ತಮ್ಮ ಬ್ಯಾಂಕ್ ಖಾತೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದ್ದಾರೆ ಎಂದು ಆರೋಪಿಸಿದೆ. ೨೦೨೧ ರಲ್ಲಿ ಹಂಚಲಾದ ಇದೇ ರೀತಿಯ ಸಂದೇಶಗಳಲ್ಲಿ ಕೆಲವು ಕಾಂಗ್ರೆಸ್ ಪಕ್ಷದ ನಾಯಕರ ಹೆಸರುಗಳಿದ್ದರೆ, ಉಲ್ಲೇಖಿಸಿದ ಅಂಕಿಅಂಶಗಳು ಈಗ ವೈರಲ್ ಪೋಷ್ಟ್ ಗಳಲ್ಲಿ ಕಂಡುಬರುವಂತೆಯೇ ಇವೆ ಎಂಬುದು ಗಮನಾರ್ಹ. ಪ್ರಸ್ತುತ ಹೇಳಿಕೆ ಹೊಸದೇನಲ್ಲ, ಆದರೆ ವಿವಿಧ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ತಪ್ಪು ಹೇಳಿಕೆಗಳ ಮಾದರಿಯ ಭಾಗವಾಗಿದೆ ಎಂದು ಇದು ತೋರಿಸುತ್ತದೆ.
ಜುಲೈ ೨೦೨೧ ರಲ್ಲಿ ವೈರಲ್ ಹೇಳಿಕೆಯ ವಿಭಿನ್ನ ಆವೃತ್ತಿಯನ್ನು ಹಂಚಿಕೊಳ್ಳುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಅಧಿಕೃತ ವಿಕಿಲೀಕ್ಸ್ ಜಾಲತಾಣದ ಎಕ್ಸ್ (ಹಿಂದೆ ಟ್ವಿಟರ್) ಖಾತೆಯನ್ನು ಪರಿಶೀಲಿಸಿದಾಗ, ನಮಗೆ ಯಾವುದೇ ಭಾರತೀಯ ರಾಜಕಾರಣಿಗಳನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಅಥವಾ ಬೇರೆ ಯಾವುದೇ ವಿದೇಶಿ ಕಪ್ಪುಹಣ ಹೊಂದಿರುವವರು ಎಂಬ ಉಲ್ಲೇಖನ ಅಥವಾ ಪಟ್ಟಿ ಕಂಡುಬರಲಿಲ್ಲ. ವಿಕಿಲೀಕ್ಸ್ ಎಕ್ಸ್ ನಲ್ಲಿ ಆಗಸ್ಟ್ ೫, ೨೦೧೧ ರಂದು ಹೀಗೆಂದು ಸ್ಪಷ್ಟೀಕರಣವನ್ನು ನೀಡಿದೆ - "ಎಚ್ಚರಿಕೆ: ವಿಕಿಲೀಕ್ಸ್ ಮತ್ತು ಭಾರತೀಯ ಕಪ್ಪು ಹಣ: ಕೆಳಗಿನವು ನಕಲಿ ಚಿತ್ರವಾಗಿದೆ ಮತ್ತು ವಿಕಿಲೀಕ್ಸ್ನಲ್ಲಿ ಎಂದಿಗೂ ಕಾಣಿಸುವುದಿಲ್ಲ."
ಆಗಸ್ಟ್ ೨೦೧೧ ರಲ್ಲಿ ಎಕ್ಸ್ ನಲ್ಲಿ ಹಂಚಿಕೊಂಡ ವಿಕಿಲೀಕ್ಸ್ ನ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್.
ತೀರ್ಪು:
ವಿಕಿಲೀಕ್ಸ್ ಯುಕೆಯಲ್ಲಿನ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಹೊಂದಿರುವ ಬಿಜೆಪಿ ನಾಯಕರ ಪಟ್ಟಿಯನ್ನು ಪ್ರಕಟಿಸಿದೆ ಎಂಬ ಹೇಳಿಕೆ ತಪ್ಪು. ಇದು ೨೦೨೧ ರಿಂದ ವಿವಿಧ ರೂಪಗಳಲ್ಲಿ ಪ್ರಸಾರವಾಗುತ್ತಿರುವ ದೀರ್ಘಕಾಲದ ತಪ್ಪು ಹೇಳಿಕೆಯ ಮತ್ತೊಂದು ಆವೃತ್ತಿಯಾಗಿದೆ. ವಿಕಿಲೀಕ್ಸ್ ಅಂತಹ ಯಾವುದೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.