ನೀಟ್ ಹಗರಣದ ಮಾಸ್ಟರ್ ಮೈಂಡ್ ಮುಸ್ಲಿಂ ವ್ಯಕ್ತಿ ಎಂದು ಸೂಚಿಸುವ ವೈರಲ್ ಆರೋಪಗಳು ತಪ್ಪುದಾರಿಗೆಳೆಯುವಂತಿವೆ
ಸಾರಾಂಶ:
೨೦೨೪ರ ನೀಟ್ ಪರೀಕ್ಷೆ ಪೇಪರ್ ಸೋರಿಕೆ ಘಟನೆಯ ಹಿಂದಿನ ಮಾಸ್ಟರ್‌ಮೈಂಡ್‌ಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಸೂಚಿಸುವ ಪೋಷ್ಟ್ ಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಕೇಂದ್ರೀಯ ತನಿಖಾ ದಳ (ಸಿಬಿಐ) ಇನ್ನೂ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದು, ಇತರ ಧಾರ್ಮಿಕ ಸಮುದಾಯಗಳಿಗೆ ಸೇರಿದ ಶಂಕಿತರನ್ನು ಸಹ ಬಂಧಿಸಿದೆ. ಹಾಗಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರನ್ನು ಮಾತ್ರ ಸಿಬಿಐ ಬಂಧಿಸಿದೆ ಎಂಬ ನಿರೂಪಣೆಗಳು ತಪ್ಪುದಾರಿಗೆಳೆಯುವಂತಿವೆ.
ಹೇಳಿಕೆ:
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಇತ್ತೀಚೆಗೆ ಜೂನ್ ೪, ೨೦೨೪ ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ) ೨೦೨೪ (NEET-UG 2024) ಫಲಿತಾಂಶಗಳನ್ನು ಘೋಷಿಸಿತು. ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರು ಅಸಮರ್ಪಕ ಕಾರ್ಯಗಳನ್ನು ಆರೋಪಿಸಿ ಮರುಪರೀಕ್ಷೆಗೆ ಒತ್ತಾಯಿಸಿದರು. ಫೇಸ್‌ಬುಕ್ ಬಳಕೆದಾರರು ಜುಲೈ ೧, ೨೦೨೪ ರಂದು ಕನ್ನಡ ಶೀರ್ಷಿಕೆಯೊಂದಿಗೆ ಪೋಷ್ಟ್ ಒಂದನ್ನು ಹಂಚಿಕೊಂಡಿದ್ದು, ಅದು ಹೀಗೆ ಹೇಳುತ್ತದೆ, "NEET ಪೇಪರ್ ಲೀಕ್ ನ ಮಾಸ್ಟರ್ ಮೈಂಡ್ ಓಯಸಿಸ್ ಸ್ಕೂಲ್ ನ ಪ್ರಿನ್ಸಿಪಾಲ್ ಎಹೆಸಾನ್ ಉಲ್ ಹುಕ್,ಮತ್ತವನ ಚೇಲಾ ಇಮ್ತಿಯಾಜ್ ಆಲಂ ಮತ್ತು ಸ್ಥಳೀಯ ಪತ್ರಕರ್ತ ಜಮಾಲುದ್ದೀನ್! #ಈಗ ಮಾತಾಡ್ರೋ." 2024 ರ ನೀಟ್ ಪೇಪರ್ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಐ ಮುಸ್ಲಿಮರನ್ನು ಮಾತ್ರ ಬಂಧಿಸಿದೆ ಎಂದು ಈ ಪೋಷ್ಟ್ ಸೂಚಿಸುತ್ತದೆ.
೨೦೨೪ರ ನೀಟ್ ಹಗರಣದಲ್ಲಿ ಬಂಧಿತರಾದವರು ಕೇವಲ ಮುಸ್ಲಿಮರು ಎಂದು ಹೇಳುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಇನ್ನೊಬ್ಬ ಫೇಸ್‌ಬುಕ್ ಬಳಕೆದಾರರು ಜೂನ್ ೩೦, ೨೦೨೪ ರಂದು ಇದೇ ರೀತಿಯ ಕೋಮು ಶೀರ್ಷಿಕೆಯೊಂದಿಗೆ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಕೂಡ ಬಳಕೆದಾರರು ಜೂನ್ ೨೯, ೨೦೨೪ ರಂದು ಇದೇ ರೀತಿಯ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ನಾವು ವೈರಲ್ ಹೇಳಿಕೆಯನ್ನು ವಿಶ್ಲೇಷಿಸಿದ್ದೇವೆ ಮತ್ತು "ನೀಟ್," "ನೀಟ್ ಹಗರಣ ೨೦೨೪," "ಸಿಬಿಐ," ಮತ್ತು "ಬಂಧನಗಳು" ಮೊದಲಾದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದ್ದೇವೆ. ಇದು ಜೂನ್ ೩೦, ೨೦೨೪ರ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗೆ ನಮ್ಮನ್ನು ಕರೆದೊಯ್ಯಿತು.
ಜೂನ್ ೩೦, ೨೦೨೪ರ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಸ್ಕ್ರೀನ್‌ಶಾಟ್.
ಈ ವರದಿಯ ಪ್ರಕಾರ, ಜಾರ್ಖಂಡ್‌ನ ಓಯಸಿಸ್ ಶಾಲೆಯ ಪ್ರಾಂಶುಪಾಲರಾದ ಎಹ್ಸಾನುಲ್ ಹಕ್ (ನೀಟ್-ಯುಜಿ ೨೦೨೪ರ ಪರೀಕ್ಷಾ ಕೇಂದ್ರಗಳಲ್ಲಿ ಒಂದಾಗಿದೆ), ಮತ್ತು ಅಲ್ಲಿನ ಉಪ-ಪ್ರಾಂಶುಪಾಲ ಮತ್ತು ನೀಟ್-ಯುಜಿ ೨೦೨೪ರ ಎನ್‌ಟಿಎ ವೀಕ್ಷಕ ಇಮ್ತಿಯಾಜ್ ಆಲಂ ಅವರನ್ನು ಸಿಬಿಐ ಬಂಧಿಸಿದೆ. ಇವರಿಬ್ಬರಿಗೆ ಸಹಾಯ ಮಾಡಿದ್ದಕ್ಕಾಗಿ ಹಿಂದಿ ಪತ್ರಿಕೆ ಪ್ರಭಾತ್ ಖಬರ್‌ನಲ್ಲಿ ಕೆಲಸ ಮಾಡುತ್ತಿದ್ದ ಹಜಾರಿಬಾಗ್ ಮೂಲದ ಪತ್ರಕರ್ತ ಮೊಹಮ್ಮದ್ ಜಮಾಲುದಿನ್ ಅವರನ್ನು ಸಹ ಬಂಧಿಸಲಾಗಿದೆ ಎಂದು ವರದಿಯು ಹೇಳಿಕೊಂಡಿದೆ.
ಜೂನ್ ೩೦, ೨೦೨೪ ರಂದು, ಗುಜರಾತ್‌ನ ಗೋಧ್ರಾದಲ್ಲಿರುವ ಜಯ್ ಜಲರಾಮ್ ಶಾಲೆಯ (ಮತ್ತೊಂದು ನೀಟ್-ಯುಜಿ ೨೦೨೪ರ ಪರೀಕ್ಷಾ ಕೇಂದ್ರ) ಮಾಲೀಕ ದೀಕ್ಷಿತ್ ಪಟೇಲ್ ಅವರನ್ನು ನೀಟ್-ಯುಜಿ ಪರೀಕ್ಷೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿತು. ಜೂನ್ ೩೦, ೨೦೨೪ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆರೋಪಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಭ್ಯರ್ಥಿಗಳಿಂದ ರೂ.೧೦ ಲಕ್ಷವನ್ನು ಆಗ್ರಹಿಸಿದ್ದರು.
ಜೂನ್ ೩೦, ೨೦೨೪ ರ ಟೈಮ್ ಆಫ್ ಇಂಡಿಯಾ ವರದಿಯ ಸ್ಕ್ರೀನ್‌ಶಾಟ್.
ದಿ ಹಿಂದೂ ಮತ್ತು ಇಂಡಿಯಾ ಟಿವಿ ಯಂತಹ ಇತರ ಸುದ್ದಿ ಮಾಧ್ಯಮಗಳು ಈ ಬಂಧನಗಳ ಬಗ್ಗೆ ವರದಿ ಮಾಡಿವೆ. ಸಿಬಿಐ ಬಂಧಿಸಿರುವ ವ್ಯಕ್ತಿಗಳು ಯಾವುದೇ ಒಂದು ಧಾರ್ಮಿಕ ಸಮುದಾಯಕ್ಕೆ ಸೇರಿದವರಲ್ಲ ಎಂದು ಈ ವರದಿಗಳು ಸ್ಪಷ್ಟಪಡಿಸುತ್ತವೆ. ಅದಲ್ಲದೆ, ಬಂಧಿತ ವ್ಯಕ್ತಿಗಳಲ್ಲಿ ಯಾರನ್ನು ಕೂಡ ಈ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಸೂತ್ರಧಾರ ಎಂದು ಸಿಬಿಐ ಹೇಳಿಕೊಂಡಿಲ್ಲ.
ತೀರ್ಪು:
ನೀಟ್-ಯುಜಿ ೨೦೨೪ ರ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ವ್ಯಕ್ತಿಗಳು ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೇರಿದವರಲ್ಲ ಎಂದು ವೈರಲ್ ಪೋಷ್ಟ್ ನ ವಿಶ್ಲೇಷಣೆಯು ಬಹಿರಂಗಪಡಿಸುತ್ತದೆ. ಆದ್ದರಿಂದ, ಆರೋಪಿಗಳು ಕೇವಲ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಆನ್‌ಲೈನ್ ನಲ್ಲಿ ಕಂಡುಬಂದಿರುವ ಆರೋಪಗಳು ತಪ್ಪುದಾರಿಗೆಳೆಯುವಂತಿವೆ.