- Home
- /
- ಸತ್ಯ ಪರಿಶೀಲನೆಗಳು
- /
- ಹಗರಣ ಎಚ್ಚರಿಕೆ
- /
- ಅಂಚೆ ಇಲಾಖೆಯ ಹೆಸರಿನಲ್ಲಿ...
ಅಂಚೆ ಇಲಾಖೆಯ ಹೆಸರಿನಲ್ಲಿ ಮೊಬೈಲ್‌ಗೆ ಬರುತ್ತಿವೆ ನಕಲಿ ಸಂದೇಶ
“ನಿಮ್ಮ ಪಾರ್ಸೆಲ್ ಗೋದಾಮಿನಲ್ಲಿ ಡೆಲಿವರಿಗಾಗಿ ಕಾಯ್ತಿದೆ. ಹಲವಾರು ಬಾರಿ ಡೆಲಿವರಿ ಮಾಡಲು ಪ್ರಯತ್ನಿಸಿದರೂ, ತಪ್ಪಾದ ವಿಳಾಸದ ಕಾರಣ ಸಾಧ್ಯವಾಗಿಲ್ಲ. ದಯವಿಟ್ಟು ಕೆಳಗಿನ ಲಿಂಕ್ ಒತ್ತಿ, ನಿಮ್ಮ ಮಾಹಿತಿಯನ್ನು ಅಪ್ಡೇಡ್ ಮಾಡಿ. 24 ಗಂಟೆಯೊಳಗೆ ಡೆಲಿವರಿ ಮಾಡಲಾಗುವುದು” ಎಂಬ ಸಂದೇಶವೊಂದು ಭಾರತೀಯ ಅಂಚೆಯ ಹೆಸರಿನಲ್ಲಿ ಅನೇಕ ಜನರ ಮೊಬೈಲ್‌ಗೆ ಬರುತ್ತಿವೆ.
ಭಾರತೀಯ ಅಂಚೆಯ ಹೆಸರಿನಲ್ಲಿ ಸಂದೇಶ ಬರುತ್ತಿರುವುದರಿಂದ ಅನೇಕ ಜನರು ಅದರಲ್ಲಿರುವ ಲಿಂಕ್ ಒತ್ತಿ ತಮ್ಮ ಮಾಹಿತಿಯನ್ನು ಅಪ್ಲೋಡ್ ಮಾಡುವ ಸಾಧ್ಯಗಳಿವೆ.
ಹಾಗಾದರೆ, ಅಂಚೆ ಇಲಾಖೆ ನಿಜವಾಗಿಯೂ ಆ ರೀತಿಯ ಸಂದೇಶ ಕಳುಹಿಸಿದೆಯಾ? ಲಿಂಕ್ ಒತ್ತಿದರೆ ಏನಾಗುತ್ತದೆ ಎಂದು ನೋಡೋಣ.
ಫ್ಯಾಕ್ಟ್ ಚೆಕ್ : ಅಂಚೆ ಇಲಾಖೆಯ ಹೆಸರಿನಲ್ಲಿ ಮೊಬೈಲ್‌ಗೆ ಬರುತ್ತಿರುವ ಸಂದೇಶ ನಕಲಿ (ಫೇಕ್) ಎಂದು ಸರ್ಕಾರದ ಅಧಿಕೃತ ಸಂಸ್ಥೆ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಖಚಿತಪಡಿಸಿದೆ.
“ಅಂಚೆ ಇಲಾಖೆ ಸಂದೇಶದ ಮೂಲಕ ವಿಳಾಸ ಅಪ್ಡೇಟ್ ಮಾಡಲು ಕೋರುವುದಿಲ್ಲ. ಮೊಬೈಲ್‌ಗೆ ಬರುತ್ತಿರುವ ಸಂದೇಶಗಳು ಸೈಬರ್ ವಂಚಕರದ್ದಾಗಿವೆ. ಲಿಂಕ್ ಕ್ಲಿಕ್ ಮಾಡಿ ಮೋಸ ಹೋಗಬೇಡಿ. ಅಂಚೆಗೆ ಸಂಬಂಧಿಸಿದ ಏನೇ ಗೊಂದಲಗಳಿದ್ದರೂ, ನೇರವಾಗಿ ಅಂಚೆ ಕಚೇರಿಗೆ ಹೋಗಿ ಬಗೆಹರಿಸಿಕೊಳ್ಳಿ” ಎಂದು ಪಿಐಬಿ ತಿಳಿಸಿದೆ.
ಅಂಚೆ ಇಲಾಖೆಯೂ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ, ಮೊಬೈಲ್‌ಗೆ ಬರುತ್ತಿರುವ ಸಂದೇಶ ನಕಲಿ ಎಂದು ಖಚಿತಪಡಿಸಿದೆ
ಅಂಚೆ ಇಲಾಖೆಯ ಹೆಸರಿನಲ್ಲಿ ಬಂದಿರುವ ಸಂದೇಶದಲ್ಲಿರುವ ಲಿಂಕ್ ಒತ್ತಿ ವೈಯುಕ್ತಿಕ ಮಾಹಿತಿ ನೀಡಿದರೆ ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯುವ ಸಾಧ್ಯತೆಗಳಿವೆ.
ಎಸ್‌ಎಂಎಸ್ ಮೂಲಕ ನಡೆಯುವ ಸೈಬರ್ ವಂಚಕರ ದಾಳಿಯಿಂದ ತಪ್ಪಿಸಿಕೊಳ್ಳಲು ಪಿಐಬಿ ಕೆಲವೊಂದು ಸಲಹೆಗಳನ್ನು ನೀಡಿವೆ. ಅವುಗಳು ಹೀಗಿವೆ.
- ಅಪರಿಚಿತ ಮೂಲಗಳಿಂದ, ವಿಶೇಷವಾಗಿ ತುರ್ತಾಗಿ ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸುವ ಸಂದೇಶಗಳನ್ನು ನಂಬುವುದರಿಂದ ದೂರವಿರಿ
- ಪ್ರತಿಷ್ಠಿತ ಸಂಸ್ಥೆಗಳ ಹೆಸರಿನಲ್ಲಿ ಬರುವ ಸಂದೇಶಗಳ ಸತ್ಯಾಸತ್ಯತೆಯನ್ನು ತಿಳಿದು ಮುಂದುವರಿಯಿರಿ
- ಮೊಬೈಲ್‌ಗೆ ಬಂದಿರುವ ಅನುಮಾನಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಅಗತ್ಯವಿದ್ದರೆ ಅವುಗಳನ್ನು ವೆಬ್‌ಸೈಟ್‌ನಲ್ಲಿ ಟೈಪ್ ಮಾಡಿ ಪರಿಶೀಲಿಸಿ
- ಅಪರಿಚಿತ ಸಂದೇಶಗಳಿಗೆ ನಿಮ್ಮ ವೈಯುಕ್ತಿಕ, ಹಣಕಾಸಿನ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನೀಡಬೇಡಿ
- ಯಾವುದೇ ಅನುಮಾನಾಸ್ಪದ ಸಂದೇಶ ಬಂದರೆ ತಕ್ಷಣವೇ ಸಂಬಂಧಿತ ಅಧಿಕಾರಿಗಳು ಅಥವಾ ಸೈಬರ್ ಸುರಕ್ಷತಾ ತಂಡಕ್ಕೆ ವರದಿ ಮಾಡಿ
ಸರ್ಕಾರದ ಅಧಿಕೃತ ಸಂಸ್ಥೆ ಪಿಐಬಿ ಖಚಿತಪಡಿಸಿದ ಪ್ರಕಾರ, ಅಂಚೆ ಇಲಾಖೆಯ ಹೆಸರಿನಲ್ಲಿ ಮೊಬೈಲ್‌ಗೆ ಬರುತ್ತಿರುವ ಸಂದೇಶಗಳು ಸೈಬರ್ ವಂಚಕರದ್ದಾಗಿವೆ.