- Home
- /
- ಉನ್ನತ ಹಕ್ಕು ವಿಮರ್ಶೆ
- /
- ದಾವಣಗೆರೆಯ ಚನ್ನಗಿರಿ...
ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ ಕೆರೆಬೀಳಚಿ ಗ್ರಾಮದಲ್ಲಿ ಹಿಂದೂ ಕುಟುಂಬದ ಒಂದೂ ಮನೆಗಳಿಲ್ಲ ಎಂಬುದು ಸುಳ್ಳು
ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕೆರೆಬಿಳಚಿ ಎಂಬ ಗ್ರಾಮದಲ್ಲಿ ಒಬ್ಬನೇ ಒಬ್ಬ ಹಿಂದೂ ಇಲ್ಲ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ “ಇದು ಯಾವುದೋ ಪಾಕಿಸ್ತಾನದ ದೃಶ್ಯ ಅಂದುಕೊಳ್ಳಬೇಡಿ ನಮ್ಮ ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆರೆಬೀಳಚಿ ಗ್ರಾಮ, ಹುಡುಕಿದರೂ ಒಬ್ಬನೇ ಒಬ್ಬ ಹಿಂದೂ ಮನೆ ಹುಡಕಲು ಸಾದ್ಯವೇ ಇಲ್ಲ” ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಇದೇ ರೀತಿ ಎಕ್ಸ್ ಬಳಕಾದಾರರಾದ ಬಲಪಂಥೀಯ ಪ್ರತಿಪಾದಕ ಮೋಹನ್‌ಗೌಡ ಎಂಬುವವರು ಇದೇ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಇದೇ ಚಿತ್ರವನ್ನು ಹಂಚಿಕೊಂಡಿರುವ ಹಲವು ಎಕ್ಸ್ ಖಾತೆ ಬಳಕೆದಾರರು, ಇದು ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿರುವ ಕೆರೆಬಿಳಚಿ ಎಂಬ ಪುಟ್ಟ ಗ್ರಾಮ, ಅಲ್ಲಿ ಈಗ ಒಬ್ಬನೇ ಒಬ್ಬ ಹಿಂದೂ ಕೂಡ ವಾಸಿಸುವುದಿಲ್ಲ. ಮುಸ್ಲಿಂ ಅಪರಾಧಿಯ ಶವಯಾತ್ರೆಯಲ್ಲಿ ಜನಸಂದಣಿಯನ್ನು ನೋಡಿ ಎಂಬ ಒಕ್ಕಣೆಯನ್ನು ಸೇರಿಸುವ ಮೂಲಕ ಕೋಮು ದ್ವೇಷದ ಹಿನ್ನಲೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆರೆಬೀಳಚಿ ಗ್ರಾಮದಲ್ಲಿ ಒಬ್ಬ ಹಿಂದೂ ವ್ಯಕ್ತಿಯಾಗಲಿ, ಒಂದು ಕುಟುಂಬವಾಗಲಿ ಇಲ್ಲವೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆರೆಬೀಳಚಿ ಗ್ರಾಮದಲ್ಲಿ ಒಬ್ಬ ಹಿಂದೂ ವ್ಯಕ್ತಿಯಾಗಲಿ, ಒಂದು ಕುಟುಂಬವನ್ನಾಗಲಿ ಹುಡುಕಲು ಸಾಧ್ಯವಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರವ ಹೇಳಿಕೆಯನ್ನು ಪರಿಶೀಲಿಸಲು, ಇತ್ತೀಚಿನ 2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಮತದಾರರ ಪಟ್ಟಿಗಳನ್ನು ಗಮನಿಸಿದಾಗ ಅದರಲ್ಲಿ ಮುಸ್ಲಿಮೇತರರ ಹೆಸರುಗಳೂ ಕಂಡುಬಂದಿವೆ.
ಭಾರತದ ಅಧಿಕೃತ 2011 ರ ಜನಗಣತಿಯ ಪ್ರಕಾರ, ಕೆರೆಬಿಳಚಿ ಗ್ರಾಮದ ಜನಸಂಖ್ಯೆ 9754 ಆಗಿದೆ.
ಅಲ್ಲದೆ, ಕರ್ನಾಟಕ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೆರೆಬಿಳಚಿ ಗ್ರಾಮದ ಪಡಿತರ ಚೀಟಿಗಳ (ಆಹಾರ ಭದ್ರತಾ ಕಾರ್ಡ್‌ಗಳು) ವಿವರಗಳನ್ನು ಪರಿಶೀಲಿಸಿದಾಗ, ಅಲ್ಲಿ ಮುಸ್ಲಿಮೇತರ (ಹಿಂದೂಗಳು) ಹೆಸರುಗಳೂ ಕಂಡುಬಂದಿವೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕೆರೆಬಿಳಚಿ ಗ್ರಾಮಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ನೀಡಲಾದ ಜಾಬ್ ಕಾರ್ಡ್‌ಗಳ (ಆರ್ಕೈವ್ ಮಾಡಿದ ಲಿಂಕ್)ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದ್ದು ಅದರಲ್ಲಿ ಮುಸ್ಲಿಮೇತರರು (ಹಿಂದೂಗಳು) ಹೆಸರುಗಳು ಇರುವುದನ್ನು ನೋಡಬಹುದು. ಆದರೆ ಈ ಗ್ರಾಮದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವುದರಿಂದ ಈ ರೀತಿ ತಪ್ಪು ಭಾವನೆ ಬರುವಂತೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಮತ್ತಷ್ಟು ಪರಿಶೀಲನೆ ಮಾಡಲು ಕೆರೆಬಿಳಚಿ ಗ್ರಾಮದ ಗ್ರಾಮಪಂಚಾಯ್ತಿ ಕಾರ್ಯಾಲಯದ ವೆಬ್‌ಸೈಟ್‌ನಲ್ಲಿ ದಾಖಲಿಸಿದ್ದ ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಹಿದಾಯತ್ ಅವರನ್ನು ಸಂಪರ್ಕಿಸಿ ಮತನಾಡಿಸಿದಾಗ, ಕೆರೆಬಿಳಚಿ ಗ್ರಾಮದಲ್ಲಿ 88% ಮುಸ್ಲಿಮರಿದ್ದು 12 % ಹಿಂದೂ ಸಮುದಾಯದ ಜನರಿದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರವ ಪೋಸ್ಟ್ ನನ್ನ ಗಮನಕ್ಕೂ ಬಂದಿದೆ. ಆದರೆ ಅದು ಸುಳ್ಳು. ಹಾಲಿ ಪಂಚಾಯ್ತಿ 26 ಸದಸ್ಯರಲ್ಲಿ 5 ಜನ ಹಿಂದೂ ಧರ್ಮದ ಸದಸ್ಯರಿದ್ದಾರೆ ಎಂದು ಹೇಳಿದರು.
ಹಿದಾಯತ್ ಉಲ್ಲಾಖಾನ್ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರು
ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆರೆಬೀಳಚಿ ಗ್ರಾಮದಲ್ಲಿ ಒಬ್ಬ ಹಿಂದೂವೂ ಇಲ್ಲ ಎಂಬ ಪ್ರತಿಪಾದನೆ ಸುಳ್ಳು. ಇಲ್ಲಿ ಹಿಂದೂ ಧರ್ಮದವರೂ ಇದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.