ಸಚಿವ ಎಂ.ಬಿ.ಪಾಟೀಲ್ ಹೆಸರಿನಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಗೆ ಬರೆದಿದ್ದರು ಎನ್ನಲಾದ ನಕಲಿ ಪತ್ರ ಮತ್ತೆ ವೈರಲ್

Update: 2024-05-31 09:27 GMT

ಸಚಿವ ಎಂ. ಬಿ. ಪಾಟೀಲ್ ಅವರು ಸೋನಿಯಾ ಗಾಂಧಿ ಅವರಿಗೆ 2017ರಲ್ಲಿ ಬರೆದಿದ್ದರು ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

29 ಮೇ 2024 ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಪತ್ರವನ್ನು ಪ್ರಕಟಿಸಿರುವ ಬಳಕೆದಾರರೊಬ್ಬರು, ‘ಸೂಕ್ಷ್ಮವಾಗಿ ಗಮನಿಸಿ, ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆ ಇದು. ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಚಿವ ಎಂ. ಬಿ. ಪಾಟೀಲ್ ಅವರು ಸೋನಿಯಾ ಗಾಂಧಿ ಅವರಿಗೆ ಪತ್ರದಲ್ಲಿ ವಿವರಿಸಿರುವ ರೀತಿ ಬಿಜೆಪಿಯನ್ನು ಮಣಿಸಲು ಹಿಂದೂಗಳನ್ನು ಮಣಿಸಬೇಕು ಎಂದು ಬರೆದಿದ್ದಾರೆ. ಇದಕ್ಕಾಗಿ ಜಾಗತಿಕ ಕ್ರೈಸ್ತ ಮಂಡಳಿ ಹಾಗೂ ವಿಶ್ವ ಇಸ್ಲಾಮಿಕ್ ಸಂಘಟನೆ ನೆರವು ಪಡೆಯುವುದಾಗಿ ಹೇಳಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.  ಇದೇ ರೀತಿಯ ಹಲವು ಪೋಸ್ಟ್‌ಗಳನ್ನ ಇಲ್ಲಿಇಲ್ಲಿ ಮತ್ತು ಇಲ್ಲಿ ಗಮನಿಸಬಹುದು.

ವೈರಲ್ ಫೋಟೋದಲ್ಲಿ ಕಾಣುವ ಈ ಪತ್ರವನ್ನು ಬಿಜಾಪುರ ಲಿಂಗಾಯ ಜಿಲ್ಲಾ ಶಿಕ್ಷಣ ಸಂಘಟನೆ (ಬಿಎಲ್‌ಡಿಇಎ) ಲೆಟರ್‌ ಹೆಡ್‌ನಲ್ಲಿ ಸಿದ್ದಪಡಿಸಲಾಗಿದೆ. ಈ ಸಂಸ್ಥೆಗೆ ಡಾ. ಎಂ. ಬಿ. ಪಾಟೀಲ್ ಅವರೇ ಅಧ್ಯಕ್ಷರು.

ಈ ಪತ್ರದಲ್ಲಿ ಇರುವ ಮಾಹಿತಿ ಅನ್ವಯ, ಎಂ. ಬಿ. ಪಾಟೀಲ್ ಹಾಗೂ ಹಲವು ಸಚಿವರು ಜಾಗತಿಕ ಕ್ರೈಸ್ತ ಮಂಡಳಿ (ಜಿಸಿಸಿ) ಹಾಗೂ ವಿಶ್ವ ಇಸ್ಲಾಮಿಕ್ ಸಂಘಟನೆ (ಡಬ್ಲ್ಯೂಐಒ) ಜೊತೆ ಸಮಗ್ರ ಚರ್ಚೆ ನಡೆಸಿದ್ದು, 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಿ ಜಾರಿಗೊಳಿಸಲು ಮುಂದಾಗಿದ್ದೇವೆ. ಮುಸ್ಲಿಮರು ಹಾಗೂ ಕ್ರೈಸ್ತರನ್ನು ಅವರ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಒಗ್ಗೂಡಿಸೋದು ಹಾಗೂ ಹಿಂದೂಗಳನ್ನು ಅವರ ಜಾತಿ, ಉಪ ಜಾತಿ, ವರ್ಗ ಹಾಗೂ ಪಂಗಡಗಳಲ್ಲಿ ವಿಭಜಿಸುವ ಮೂಲಕ ಈ ಗುರಿ ಸಾಧನೆ ಮಾಡಲಾಗುವುದು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಗುರಿ ಸಾಧನೆಗೆ ವೀರಶೈವ – ಲಿಂಗಾಯತ ಸಮುದಾಯದಲ್ಲಿ ಇರುವ ಭಿನ್ನತೆಗಳನ್ನ ಬಳಸಿಕೊಳ್ಳಲಾಗುವುದು ಹಾಗೂ ಮುಸ್ಲಿಮರು ಹಾಗೂ ಕ್ರೈಸ್ತರಿಗೆ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಲಾಗುವುದು ಅಷ್ಟೇ ಅಲ್ಲ, ಚುನಾವಣೆಯ ಪ್ರಣಾಳಿಕೆಯಲ್ಲೂ ಘೋಷಣೆ ಮಾಡೋದಾಗಿ ಈ ಪತ್ರದಲ್ಲಿ ವಿವರಿಸಲಾಗಿದೆ.

ಇನ್ನು ಈ ಪತ್ರದ ಕೊನೆಯಲ್ಲಿ ಕಾಂಗ್ರೆಸ್ ಪಕ್ಷವು 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತದೆ. ಹಿಂದೂಗಳನ್ನು ವಿಭಜಿಸುವ ಹಾಗೂ ಮುಸ್ಲಿಮರನ್ನು ಒಗ್ಗೂಡಿಸುವ ತಂತ್ರಗಾರಿಕೆ ಗೆಲ್ಲುತ್ತದೆ. ಇದಕ್ಕೆ ನಿಮ್ಮ ಆಶೀರ್ವಾದ ಹಾಗೂ ಮಾರ್ಗದರ್ಶನ ಬೇಕು ಎಂದು ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಈ ಪತ್ರವನ್ನು ಎಂ. ಬಿ. ಪಾಟೀಲ್ ಬರೆದಿದ್ದರು ಎಂದು ಬಿಂಬಿಸಲಾಗಿದೆ.

ಈ ವೈರಲ್ ಪತ್ರದ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,ಈ ಪತ್ರವನ್ನು ಪೋಸ್ಟ್‌ ಕಾರ್ಡ್‌ ಸುದ್ದಿ ಸಂಸ್ಥೆ ಮೊದಲಿಗೆ ಪ್ರಕಟಿಸಿದ್ದು ಕಂಡು ಬಂತು. ಮೇ 2018ರಲ್ಲಿ ಪ್ರಕಟವಾದ ಈ ವರದಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಸಂಚಲನ ಮೂಡಿಸಿತ್ತು.

ಈ ನಕಲಿ ಪತ್ರ ವೈರಲ್ ಆದ ಕೂಡಲೇ ಎಂ. ಬಿ. ಪಾಟೀಲ್ ಅವರು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದರು.

ಇದು ನಕಲಿ ಪತ್ರ ಎಂದು ಸಾಬೀತುಪಡಿಸಲು ಎಂ. ಬಿ. ಪಾಟೀಲ್ ಅವರು ವೈರಲ್ ಆಗಿರುವ ಪತ್ರ ಹಾಗೂ ಬಿಎಲ್‌ಡಿಇಎ ಸಂಸ್ಥೆಯ ಅಸಲಿ ಲೆಟರ್ ಹೆಡ್‌ ಅನ್ನು ತಮ್ಮ ಪರಿಶೀಲಿಸಿದ ಎಕ್ಸ್‌ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ಪ್ರಕಟ ಮಾಡಿದ್ದರು. ಜೊತೆಯಲ್ಲೇ ಪೊಲೀಸರಿಗೆ ದೂರು ನೀಡಿರುವ ಪತ್ರವನ್ನೂ ಪ್ರಕಟಿಸಿದ್ದರು. ಈ ಎಲ್ಲಾ ಫೋಟೋಗಳ ಜೊತೆಯಲ್ಲೇ ಒಂದಿಷ್ಟು ವಿವರಣೆಯನ್ನೂ ಬರೆದುಕೊಂಡಿದ್ದರು.

ಎಂ. ಬಿ. ಪಾಟೀಲ್ ನೀಡಿದ್ದ ಮಾಹಿತಿ ಇಂತಿದೆ:

‘ಈ ಪತ್ರ ನಕಲಿ. ಈ ಕುರಿತಾಗಿ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ. ನಕಲಿ ಪತ್ರ ತಯಾರಿಸಿ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದು ಬಿಜೆಪಿಯ ಹತಾಷೆಯನ್ನು ತೋರಿಸುತ್ತದೆ. ಅವವರು ಈ ರೀತಿಯ ನಕಲಿ ಪತ್ರದ ಮೇಲೆ ಅವಲಂಬಿತರಾಗಿದ್ದಾರೆ. ಏಕೆಂದರೆ ಅವರು ಜನ ಬೆಂಬಲ ಕಳೆದುಕೊಂಡಿದ್ದಾರೆ’ ಎಂದು ಎಂ. ಬಿ. ಪಾಟೀಲ್ ಬರೆದುಕೊಂಡಿದ್ದರು. ಈ ಕುರಿತಾಗಿ ಸುದ್ದಿಗೋಷ್ಠಿಯನ್ನೂ ಕರೆದಿದ್ದ ಎಂ. ಬಿ. ಪಾಟೀಲ್, ವೈರಲ್ ಆಗಿರುವ ಪತ್ರ ನಕಲಿ ಎಂದು ಸ್ಪಷ್ಟನೆ ನೀಡಿದ್ದರು.

ಇನ್ನು ಕರ್ನಾಟಕ ಕಾಂಗ್ರೆಸ್ ಕೂಡಾ ಎಂ. ಬಿ. ಪಾಟೀಲ್ ಅವರ ಸುದ್ದಿಗೋಷ್ಠಿಯ ವಿಡಿಯೋವನ್ನು ಎಕ್ಸ್‌ನಲ್ಲಿ ಪ್ರಕಟಿಸಿತ್ತು. 2019ರ ಏಪ್ರಿಲ್ 16 ರಂದು ಈ ಟ್ವೀಟ್ ಮಾಡಲಾಗಿದೆ. ಜೊತೆಯಲ್ಲೇ ವಿವರಣೆಯನ್ನೂ ನೀಡಲಾಗಿದೆ. ‘ಇದೊಂದು ನಕಲಿ ಪತ್ರ. ಈ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾರ್ತಿಕ ಕಾನೂನು ಅಂತ್ಯ ಸಿಗುವಂತೆ ನೋಡಿಕೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಬೇಕಿದ್ದರೆ ಸುಪ್ರೀಂ ಕೋರ್ಟ್‌ಗೂ ಹೋಗಲಾಗುವುದು’ ಎಂದು ಮಾಹಿತಿ ನೀಡಲಾಗಿತ್ತು.

ಅಚ್ಚರಿಯ ವಿಷಯ ಎಂದರೆ 2019ರಲ್ಲಿ ಕರ್ನಾಟಕ ಬಿಜೆಪಿ ತನ್ನ ಪರಿಶೀಲಿಸಿದ ಎಕ್ಸ್‌ ಖಾತೆಯಲ್ಲಿ ಈ ಪತ್ರ ಪ್ರಕಟಿಸಿತ್ತು. ಈ ಪತ್ರದ ಜೊತೆ ಕಾಂಗ್ರೆಸ್‌ನ ಬಣ್ಣ ಬಯಲು ಎಂದು ಬರೆದುಕೊಂಡಿತ್ತು. ಆ ಪೋಸ್ಟ್‌ ಇಂದಿಗೂ ಹಾಗೆಯೇ ಇದೆ!

ಎನ್‌ಡಿಟಿವಿ ವರದಿ ಪ್ರಕಾರ ಈ ಪ್ರಕರಣ ಸಂಬಂಧ ಪೋಸ್ಟ್‌ ಕಾರ್ಡ್ ನ್ಯೂಸ್ ಸಹ ಸಂಸ್ಥಾಪಕನ ಬಂಧನವಾಗಿದ್ದು, ಆತನ ವಿರುದ್ಧ ಸುಳ್ಳು ಸುದ್ದಿ ಹರಡಿದ ಆರೋಪ ಹೊರಿಸಲಾಗಿತ್ತು. 2019ರಲ್ಲಿ ಮಹೇಶ್ ವಿಕ್ರಮ್ ಹೆಗ್ಡೆ ಬಂಧನವಾಗಿತ್ತು. ನಕಲಿ ಪತ್ರಕ್ಕೆ ಸಂಬಂಧಿಸಿದಂತೆ ಎಂ. ಬಿ. ಪಾಟೀಲ್ ಅವರು ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಈ ಪತ್ರ ನಕಲಿ ಎಂದು ಹಲವು ಬಾರಿ ಸ್ಪಷ್ಟನೆ ನೀಡಲಾಗಿದೆ. ಇದರ ಸೃಷ್ಟಿಕರ್ತರ ವಿರುದ್ಧ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ ಈ ಪತ್ರ ಪ್ರತಿ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಹಿಂದೂಗಳನ್ನ ವಿಭಜಿಸಿ – ಮುಸ್ಲಿಮರನ್ನು ಒಗ್ಗೂಡಿಸುವ’ ತಂತ್ರಗಾರಿಕೆ ಕುರಿತಾಗಿ ಸೋನಿಯಾ ಗಾಂಧಿ ಅವರಿಗೆ ಎಂ. ಬಿ. ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರದ ಮಾಹಿತಿ ಸುಳ್ಳು ಹಾಗೂ ಪತ್ರವೂ ನಕಲಿ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈ ನಕಲಿ ಪತ್ರನ್ನು ಸೃಷ್ಟಿಸಲಾಗಿತ್ತು.


Claim :  Letter circulated in the name of MB Patil is Old and Fake
Claimed By :  X user
Fact Check :  Fake
Tags:    

Similar News