ವಿಯೆಟ್ನಾಂನಲ್ಲಿ ವಿದ್ಯುತ್ ತಂತಿ ಪ್ರವಾಹದ ನೀರಿನಲ್ಲಿ ಬಿದ್ದು ಕಿಡಿಗಳನ್ನುಂಟು ಮಾಡುವ ವೀಡಿಯೋ ಬೆಂಗಳೂರಿನ ಘಟನೆಯೆಂದು ವೈರಲ್ ಆಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ವಿದ್ಯುತ್ ತಂತಿಯೊಂದು ಪ್ರವಾಹದ ನೀರಿನಲ್ಲಿ ಬಿದ್ದು ಕಿಡಿಗಳೇರುವುದನ್ನು ತೋರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಹಾಗು ಈ ಘಟನೆಯು ಬೆಂಗಳೂರಿನದೆಂದು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಅಕ್ಟೋಬರ್ ೧೪, ೨೦೨೪ ರಂದು ಭಾರೀ ಮಳೆಯಿಂದಾಗಿ ವಿಯೆಟ್ನಾಂನಲ್ಲಿ ಈ ಘಟನೆ ಸಂಭವಿಸಿದೆ. ಈ ವೀಡಿಯೋ ಬೆಂಗಳೂರನ್ನು ತೋರಿಸುವುದಿಲ್ಲ. ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಅಕ್ಟೋಬರ್ ೨೦, ೨೦೨೪ ರಂದು, ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ನೀರಿನಲ್ಲಿ ಬಿದ್ದಿರುವ ವಿದ್ಯುತ್ ತಂತಿಯಿಂದಾಗಿ ಪ್ರವಾಹದ ನೀರಿನಿಂದ ಹೊರಬರುವ ಭಾರಿ ದೊಡ್ಡ ಕಿಡಿಗಳ ೨೭ ಸೆಕೆಂಡುಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮಳೆ ಬೀಳುತ್ತಿದ್ದಂತೆ ಕೆಲವು ವಾಹನಗಳು ಆ ಅಪಾಯಕಾರಿ ಪ್ರದೇಶದ ಸುತ್ತಾಮುತ್ತಾ ಸಂಚರಿಸುವ ದೃಶ್ಯವೂ ವೀಡಿಯೋದಲ್ಲಿದೆ. ಕ್ಲಿಪ್‌ನೊಂದಿಗೆ ಹಂಚಿಕೊಂಡ ಶೀರ್ಷಿಕೆಯು ಈ ತುಣುಕನ್ನು ಬೆಂಗಳೂರಿನದ್ದು ಎಂದು ಸೂಚಿಸುತ್ತದೆ, ಕರ್ನಾಟಕ ಸರ್ಕಾರದ ಬ್ರಾಂಡ್ ಬೆಂಗಳೂರು ಉಪಕ್ರಮವನ್ನು ಟೀಕಿಸುತ್ತದೆ.
ಅಕ್ಟೋಬರ್ ೨೦, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ವಿಯೆಟ್ನಾಂ ಸುದ್ದಿ ವೆಬ್‌ಸೈಟ್ ಸೋಹಾದ ಸುದ್ದಿ ವರದಿಯನ್ನು ಕಂಡುಕೊಂಡಿದ್ದೇವೆ. ವರದಿಯ ಪ್ರಕಾರ, ಅಕ್ಟೋಬರ್ ೧೪, ೨೦೨೪ ರಂದು, ವಿಯೆಟ್ನಾಂನ ಕ್ಯಾನ್ ಥೋ ನಗರದಲ್ಲಿ, ಭಾರೀ ಮಳೆಯಿಂದಾಗಿ ರಸ್ತೆಗಳಲ್ಲಿ ಪ್ರವಾಹ ಉಂಟಾಗಿದೆ. ಹೈ-ವೋಲ್ಟೇಜ್ ವಿದ್ಯುತ್ ತಂತಿಯೊಂದು ಸಡಿಲಗೊಂಡು ಪ್ರವಾಹದ ನೀರಿಗೆ ಬಿದ್ದಿದ್ದು, ವೀಡಿಯೋದಲ್ಲಿ ಕಂಡುಬರುವಂತೆ ಕಿಡಿಗಳನ್ನು ಸೃಷ್ಟಿಸಿದೆ. ಅಂತೆಯೇ, ವಿಯೆಟ್ನಾಮ್‌ನ ಆನ್‌ಲೈನ್ ನ್ಯೂಸ್ ಪೋರ್ಟಲ್ Docnhanh ಇದೇ ಘಟನೆಯನ್ನು ಅಕ್ಟೋಬರ್ ೧೭, ೨೦೨೪ ರಂದು ವರದಿ ಮಾಡಿದೆ.
ಅಕ್ಟೋಬರ್ ೧೭, ೨೦೨೪ ರಂದು ಪ್ರಕಟವಾದ ಸೋಹಾ ವರದಿಯ ಸ್ಕ್ರೀನ್‌ಶಾಟ್.
ಅಕ್ಟೋಬರ್ ೧೭, ೨೦೨೪ ರಂದು ವಿಯೆಟ್ನಾಂ ಸುದ್ದಿ ವಾಹಿನಿ KÊNH VTC14 ನಿಂದ ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೋವನ್ನು ಸಹ ನಾವು ಕಂಡುಕೊಂಡಿದ್ದೇವೆ. ವೀಡಿಯೋ ಶೀರ್ಷಿಕೆಯು ಹೀಗೆ ಹೇಳುತ್ತದೆ, "ಒಡೆದುಹೋದ ವಿದ್ಯುತ್ ತಂತಿಗಳು ಪ್ರವಾಹಕ್ಕೆ ಸಿಲುಕಿದ ರಸ್ತೆಯ ಮೇಲೆ ಬೀಳುವ ಭಯಾನಕ ದೃಶ್ಯ, ಎಲ್ಲೆಡೆ ಕಿಡಿಗಳು ಹಾರುತ್ತವೆ" (ಅನುವಾದಿಸಲಾಗಿದೆ). VTC14 ಹವಾಮಾನ ಮತ್ತು ವಿಪತ್ತು ಸುದ್ದಿಗಳಲ್ಲಿ ಪರಿಣತಿ ಹೊಂದಿರುವ ದೂರದರ್ಶನ ಚಾನೆಲ್ ಆಗಿದೆ ಮತ್ತು ವೈರಲ್ ವೀಡಿಯೋದ ಬಗ್ಗೆ ಅದೇ ರೀತಿ ವರದಿ ಮಾಡಿದೆ.
ಅಕ್ಟೋಬರ್ ೧೭, ೨೦೨೪ ರಂದು ಅಪ್‌ಲೋಡ್ ಮಾಡಲಾದ KÊNH VTC14 ನ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಬೆಂಗಳೂರು ಅಥವಾ ಭಾರತಕ್ಕೆ ಸಂಬಂಧಿಸಿದಂತೆ ಈ ವೀಡಿಯೋದ ಬಗ್ಗೆ ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಇಂತಹ ಘಟನೆ ನಡೆದಿದೆ ಎಂದು ವರದಿಯಾಗಿಲ್ಲ. ಈ ವೀಡಿಯೋ ಭಾರತದದಲ್ಲ ಎಂಬುದು ಸ್ಪಷ್ಟವಾಗಿದೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ವಿಯೆಟ್ನಾಂನಲ್ಲಿ ಭಾರೀ ಮಳೆಯಿಂದ ಪ್ರವಾಹದ ಘಟನೆಯನ್ನು ತೋರಿಸುತ್ತದೆ ಎಂದು ಬಹಿರಂಗಪಡಿಸುತ್ತದೆ. ಪ್ರವಾಹದ ನೀರಿನಲ್ಲಿ ಬಿದ್ದ ವಿದ್ಯುತ್ ತಂತಿಯು ಕಿಡಿಗಳನ್ನುಂಟು ಮಾಡಿದೆ. ಹಾಗಾಗಿ ಈ ವಿಡಿಯೋ ಬೆಂಗಳೂರಿನದ್ದು ಎಂಬ ಹೇಳಿಕೆ ತಪ್ಪು.