ಗುಜರಾತಿನಲ್ಲಿ ಸೀಮಿತ ಸಂಖ್ಯೆಯ ಉದ್ಯೋಗಾವಕಾಶಗಳಿಗಾಗಿ ನೆರೆದಿದ್ದ ಭಾರೀ ಜನಸಮೂಹದ ವೈರಲ್ ವೀಡಿಯೋ ಇತ್ತೀಚಿನದಲ್ಲಲ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರೀ ಗುಂಪಿನ ವೀಡಿಯೋವು ಗುಜರಾತಿನಲ್ಲಿ ಕೇವಲ ೬೦೦ ಖಾಲಿ ಹುದ್ದೆಗಳಿಗೆ ಲಕ್ಷಾಂತರ ಯುವಕರು ಕಾಣಿಸಿಕೊಂಡಿರುವುದನ್ನು ತೋರಿಸುತ್ತದೆ ಎಂದು ಹೇಳಿ ಹಂಚಿಕೊಂಡಿದ್ದಾರೆ ಹಾಗು ಘಟನೆ ಇತ್ತೀಚೆಗೆ ಸಂಭವಿಸಿದೆ ಎಂದು ಸೂಚಿಸಿದ್ದಾರೆ. ಈ ವೀಡಿಯೋ ಗುಜರಾತಿನದ್ದಾಗಿದ್ದರೂ, ಘಟನೆಯು ನವೆಂಬರ್ ೨೦೨೧ ರದ್ದಾಗಿದೆ ಮತ್ತು ೬೦೦ ಉದ್ಯೋಗ ಪೋಸ್ಟಿಂಗ್‌ಗಳಿಗಾಗಿ ೬,೦೦೦ ಕ್ಕೂ ಹೆಚ್ಚು ಜನರು ಕಾಣಿಸಿಕೊಂಡಿದ್ದರು. ಇದು ಹೇಳಿಕೆಯನ್ನು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.
ಹೇಳಿಕೆ:
ಸೆಪ್ಟೆಂಬರ್ ೧೭, ೨೦೨೪ ರಂದು, ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ೪೫ ಸೆಕೆಂಡುಗಳ ವೀಡಿಯೋವನ್ನು ಅದು ಗುಜರಾತಿನ ಬನಾಸಕಾಂಠದಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ ಎಂದು ಹೇಳಿಕೊಂಡು ಹಂಚಿಕೊಂಡಿದ್ದಾರೆ. ವೀಡಿಯೋ ಜನರ ದೊಡ್ಡ ಗುಂಪನ್ನು ತೋರಿಸುತ್ತದೆ, ಅಲ್ಲಿ ನಾಗರಿಕ ಉಡುಪು ಧರಿಸಿದ ಹಲವಾರು ಪುರುಷರು ಜನಸಂದಣಿಯನ್ನು ನಿಯಂತ್ರಿಸುತ್ತಿದ್ದಾರೆ. ವೀಡಿಯೋ ಜೊತೆ ಹಂಚಿಕೊಂಡಿರುವ ಶೀರ್ಷಿಕೆಯಲ್ಲಿ “ಮೋದಿಯವರ ಗುಜರಾತ್ ಮಾದರಿ, ಇಲ್ಲಿ ೧೫ ಲಕ್ಷ ಕೊಡುತ್ತಿಲ್ಲ..! ಕೇವಲ ೬೦೦ ಹುದ್ದೆಗಳಿಗೆ ಉದ್ಯೋಗ ವಿನಿಮಯ ಕಛೇರಿ ಎದುರು ಜಮಾಯಿಸಿದ ಲಕ್ಷಾಂತರ ಯುವಕರು. ಅವರು ತಮ್ಮ ತವರು ರಾಜ್ಯದ ಯುವಕರಿಗೆ ಉದ್ಯೋಗ ಕೊಡಲಿಲ್ಲ, ದೇಶದ ಯುವಕರಿಗೆ ಕೊಡುತ್ತಾರೆಯೇ? ಪೋಷ್ಟ್ ನಲ್ಲಿ ಹೇಳಿಕೊಂಡಿರುವ “೧೫ ಲಕ್ಷ” ಬಹುಷಃ ನವೆಂಬರ್ ೨೦೧೬ ರಲ್ಲಿ ನೋಟು ಅಮಾನ್ಯೀಕರಣದ ಸಮಯದಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆಯ ಬಗ್ಗೆ ಉಲ್ಲೇಖವಾಗಿದೆ. ಫೇಸ್‌ಬುಕ್ ಬಳಕೆದಾರರು ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ ೧೭, ೨೦೨೪ ರಂದು ವೈರಲ್ ವೀಡಿಯೋ ಮತ್ತು ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಬಳಕೆದಾರರ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೀಡಿಯೋದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ನವೆಂಬರ್ ೨೭, ೨೦೨೧ ರಂದು ಅದೇ ಕ್ಲಿಪ್ ಅನ್ನು ಹಂಚಿಕೊಳ್ಳುವ ಎಏನ್ಐ ನ್ಯೂಸ್‌ನ ಎಕ್ಸ್ ಪೋಷ್ಟ್ ಕಂಡುಬಂದಿದೆ. ವೀಡಿಯೋದ ಶೀರ್ಷಿಕೆ ಹೀಗಿದೆ, “#Watch | ಗುಜರಾತ್: ಗ್ರಾಮ ರಕ್ಷಾ ದಳದ ೬೦೦ ಹುದ್ದೆಗಳಿಗಾಗಿ ಬನಾಸಕಾಂಠದ ಪಾಲನ್‌ಪುರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದರು."
ನವೆಂಬರ್ ೨೭, ೨೦೨೧ ದಿನಾಂಕದ ಎಏನ್ಐ ನ್ಯೂಸ್‌ನ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ನವೆಂಬರ್ ೨೮, ೨೦೨೧ ರಂದು ಪ್ರಕಟಿಸಲಾದ ನ್ಯೂಸ್18 ಗುಜರಾತ್‌ನ ನಂತರದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ವರದಿಯು ಎಏನ್ಐ ನ್ಯೂಸ್ ಹಂಚಿಕೊಂಡ ಅದೇ ವೈರಲ್ ಕ್ಲಿಪ್ ಅನ್ನು ಒಳಗೊಂಡಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಯುವಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಹೇಳುತ್ತದೆ. ಪಾಲಂಪುರದಲ್ಲಿ ಗ್ರಾಮ ರಕ್ಷಾ ದಳಕ್ಕಾಗಿ ೬೦೦ ಉದ್ಯೋಗಾವಕಾಶಗಳಿಗಾಗಿ ಬನಾಸಕಾಂಠದ ಯುವಕರು ಹೇಗೆ ಒಟ್ಟುಗೂಡಿದರು ಎಂಬುದನ್ನು ವೀಡಿಯೋ ಚಿತ್ರಿಸುತ್ತದೆ.
ನವೆಂಬರ್ ೨೮, ೨೦೨೪ ರಂದು ನ್ಯೂಸ್18 ಗುಜರಾತ್‌ನಿಂದ ವರದಿಯ ಸ್ಕ್ರೀನ್‌ಶಾಟ್.
೬೦೦ ಉದ್ಯೋಗಗಳಿಗೆ ಅರ್ಹತೆಗಳು ೫ ನೇ ತರಗತಿಗಿಂತ ಕಡಿಮೆ ಓದಿರುವವರು ಸಹ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ವರದಿಯಾಗಿದೆ, ನಂತರ ದೈಹಿಕ ಪರೀಕ್ಷೆ ನಡೆಯುವುದು. ಆಜ್ ತಕ್ ವರದಿ ಮಾಡಿದಂತೆ ಸೀಮಿತ ಸಂಖ್ಯೆಯ ಖಾಲಿ ಹುದ್ದೆಗಳ ಹೊರತಾಗಿಯೂ ೬,೦೦೦ ಕ್ಕೂ ಹೆಚ್ಚು ಜನರು ಸ್ಥಳಕ್ಕೆ ಏಕೆ ಬಂದರು ಎಂಬುದನ್ನು ಇದು ವಿವರಿಸುತ್ತದೆ. ಇದು ಉದ್ಯೋಗ ನೇಮಕಾತಿಗಾಗಿ ಲಕ್ಷಗಟ್ಟಲೆ ಜನರು ಕಾಣಿಸಿಕೊಂಡಿರುವ ಹೇಳಿಕೆಗೆ ವಿರುದ್ಧವಾಗಿದೆ. ಟೈಮ್ಸ್ ಆಫ್ ಇಂಡಿಯಾ ಮತ್ತು ಎನ್‌ಡಿಟಿವಿ ಕೂಡ ಇದೇ ರೀತಿಯ ಶೀರ್ಷಿಕೆಗಳೊಂದಿಗೆ ವೀಡಿಯೋವನ್ನು ಅದರ ಮೂಲವನ್ನು ಎಎನ್‌ಐ ನ್ಯೂಸ್‌ಗೆ ಸಲ್ಲಿಸುತ್ತಾ ಹಂಚಿಕೊಂಡಿವೆ. ಗುಜರಾತ್‌ನಿಂದ ವೈರಲ್ ವೀಡಿಯೋಗೆ ಸಂಬಂಧಿಸಿದಂತೆ ಅಂತಹ ಘಟನೆಯ ಯಾವುದೇ ಇತ್ತೀಚಿನ ವರದಿಗಳು ನಮಗೆ ಕಂಡುಬಂದಿಲ್ಲ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಇತ್ತೀಚಿನ ಘಟನೆಯನ್ನು ತೋರಿಸುವುದಿಲ್ಲ ಎಂದು ತಿಳಿದುಬಂದಿದೆ. ಕ್ಲಿಪ್ ನವೆಂಬರ್ ೨೦೨೧ ರದು. ವೀಡಿಯೋದಲ್ಲಿ ನೋಡಿದಂತೆ, ಗುಜರಾತ್‌ನ ಪಾಲಂಪುರ್‌ನಲ್ಲಿ ಗ್ರಾಮ ರಕ್ಷಕ ದಳದ ಹುದ್ದೆಗೆ ಸೀಮಿತ ಸಂಖ್ಯೆಯ ಖಾಲಿ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಕಾಣಿಸಿಕೊಂಡಿದ್ದರು. ಆದ್ದರಿಂದ, ಇದು ಇತ್ತೀಚಿನ ಘಟನೆ ಎಂಬ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.