ಗುಜರಾತ್‌ನ ಅದಾನಿ ಬಂದರಿನ ಮೂಲಕ ಹಸುಗಳನ್ನು ಅರಬ್ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

Update: 2024-04-30 10:15 GMT

ಗುಜರಾತ್‌ನ ಅದಾನಿ ಬಂದರಿನ ಮೂಲಕ ಟ್ರಕ್‌ಗಳಲ್ಲಿ ಸಾವಿರಾರು ಹಸುಗಳನ್ನು ತುಂಬಿ ವಧೆಗಾಗಿ ಅರಬ್‌ ದೇಶಗಳಿಗೆ ಕಳಿಸಲಾಗುತ್ತಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿನಾಯಕ್ ಕಟ್ಟಿಕ್ಕರ ಕನ್ನಡಿಗ ಎಂಬ ಫೇಸ್‌ಬುಕ್ ಬಳಕೆದಾರ ಈ ವಿಡಿಯೋ ಹಂಚಿಕೊಂಡಿದ್ದು, “ಗುಜರಾತ್‌ ಅದಾನಿ ಪೋರ್ಟ್‌ನಲ್ಲಿ ಹಸುಗಳಿಂದ ತುಂಬಿದ ಸಾವಿರಾರು ಟ್ರಕ್‌ಗಳು ನಿಂತಿವೆ. ಈ ಎಲ್ಲಾ ಹಸುಗಳ್ನು ಅರಬ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅರಬ್ ದೇಶಗಳಲ್ಲಿ ಈ ಹಸುಗಳನ್ನು ಏನು ಮಾಡುತ್ತಾರೆ ಎಂದು. ಹರಾಮಿ ಅಂಧ ಭಕ್ತರು ಎಲ್ಲಿ ಗೋಮಾತೆ ಎಂದು ಕೂಗಾಡುತ್ತಾರೆ ಇಲ್ಲಿ” ಎಂದು ಬರೆದುಕೊಳ್ಳಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಇದೇ ರೀತಿ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಡಿದಾಗ english.factcrescendo.com ಎಂಬ ವೆಬ್‌ಸೈಟ್‌ನಲ್ಲಿ ವಿಡಿಯೋ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಿರುವುದು ಕಂಡು ಬಂದಿದೆ.

ವೆಬ್‌ಸೈಟ್‌ ಹೇಳುವಂತೆ ಅವರು ಈ ಕುರಿತು ಹುಡುಕಿದಾಗ ಅರಬಿಕ್ ಹೆಸರಿನ ಫೇಸ್‌ಬುಕ್‌ ಪೇಜ್‌ನಲ್ಲಿ ವಿಡಿಯೋ ದೊರೆತಿದೆ. ಅದರಲ್ಲಿರುವ ಅರಬಿಕ್ ಕ್ಯಾಪ್ಶನ್ ಭಾಷಾಂತರ ಮಾಡಿದಾಗ Preparing for Eid al-Adha (ಈದ್‌ ಅಲ್ ಅದ್ಹಾ ಅಥವಾ ಬಕ್ರೀದ್‌ಗೆ ಸಿದ್ದತೆ) ಎಂದು ಬರೆದಿರುವುದು ಗೊತ್ತಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ 

ವಿಡಿಯೋ ಕುರಿತು ಇನ್ನಷ್ಟು ಹುಡುಕಾಡಿದಾಗ ಈಜಿಪ್ಟ್‌ನ ಡಮಿಯೆಟ್ಟಾ ಮೂಲದ ಮಾಂಸದ ಸಗಟು ವ್ಯಾಪಾರಿ ಹಮೇದ್ ಎಲ್ಹಗರಿ ಎಂಬವರು ಏಪ್ರಿಲ್ 19, 2024ರಂದು ವಿಡಿಯೋ ಹಂಚಿಕೊಂಡಿರುವುದು ಕಂಡು ಬಂದಿದೆ. ಹಮೀದ್ ಅವರ ಫೇಸ್‌ಬುಕ್ ಖಾತೆ ಪರಿಶೀಲಿಸಿದಾಗ ಅವರು ಈ ರೀತಿಯ ಹಲವು ವಿಡಿಯೋಗಳನ್ನು ಹಂಚಿಕೊಂಡಿರುವುದು ಗೊತ್ತಾಗಿದೆ. ವೈರಲ್ ವಿಡಿಯೋಗೆ ಹಮೇದ್ ಎಲ್ಹಗರಿ ಕೊಟ್ಟಿರುವ ಅರಬಿಕ್ ಕ್ಯಾಪ್ಶನ್ ಭಾಷಾಂತರ ಮಾಡಿದಾಗ, “ಸರಕುಗಳ ಮೇಲೆ ಮಲಗಿ ಅವುಗಳನ್ನು ತೆರವುಗೊಳಿಸಲು ಕಾಯುವವ. ಮೊದಲ 25,000 ಹೆಡ್‌ಲೈನ್‌ಗಳು” ಎಂದು ಬರೆದಿರುವುದು ಗೊತ್ತಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಮೇಲ್ಗಡೆ ಉಲ್ಲೇಖಿಸಿದ ಎರಡು ಫೇಸ್‌ಬುಕ್‌ ಖಾತೆಗಳ ವಿಡಿಯೋ ಕ್ಯಾಪ್ಶನ್ ಗಮನಿಸಿದಾಗ, ಈ ವಿಡಿಯೋ ಭಾರತದಲ್ಲ, ಯಾವುದೋ ಅರಬ್ ದೇಶದ್ದು ಎಂದು ನಮಗೆ ಅರ್ಥವಾಗುತ್ತದೆ.

english.factcrescendo.com ವೈರಲ್ ವಿಡಿಯೋದಲ್ಲಿರುವ ಬಂದರನ್ನು ಹುಡುಕಿದೆ. ಈ ವೇಳೆ ಅದು ‘ಇರಾಕ್‌ನ ಉಮ್ಮು ಕಸ್ರ್ ಬಂದರು’ ಎಂದು ತಿಳಿದು ಬಂದಿದೆ.

ಬಳಿಕ english.factcrescendo.com ವೈರಲ್ ವಿಡಿಯೋದಲ್ಲಿ ಬಂದರಿನಲ್ಲಿ ನಿಂತಿರುವ ಟ್ರಕ್‌ಗಳನ್ನು ಪರಿಶೀಲಿಸಿದೆ. ಟ್ರಕ್‌ಗಳನ್ನು ಝೂಮ್ ಮಾಡಿ ನೋಡಿದಾಗ ಅದರ ಲೋಗೋ ಮರ್ಸಿಡೀಸ್ ಬೆಂಝ್‌ನದ್ದು ಎಂದು ಗೊತ್ತಾಗುತ್ತದೆ. ಭಾರತದಲ್ಲಿ ಮರ್ಸಿಡೀಸ್ ಬೆಂಝ್‌ನ ಟ್ರಕ್‌ಗಳನ್ನು ಮಾರಾಟ ಮಾಡುತ್ತಿಲ್ಲ. ಬದಲಾಗಿ ಭಾರತದಲ್ಲಿ ಮರ್ಸಿಡೀಸ್ ಬೆಂಝ್ ಗ್ರೂಪ್‌ನ ಡೈಮ್ಲೆರ್ ಕಂಪನಿಯು ‘ಭಾರತ್ ಬೆಂಝ್‘ ಬ್ರ್ಯಾಂಡ್ ಅಡಿ ಟ್ರಕ್‌ಗಳನ್ನು ಮಾರಾಟ ಮಾಡುತ್ತದೆ. ‘ಭಾರತ್ ಬೆಂಝ್‌’ ಮತ್ತು ಮರ್ಸಿಡಿಸ್ ಬೆಂಝ್‌ನ ಲೋಗೋಗಳು ವಿಭಿನ್ನವಾಗಿವೆ.

ಇನ್ನೂ ವೈರಲ್ ವಿಡಿಯೋದಲ್ಲಿ ಕಾಣಿಸುತ್ತಿರುವ ವ್ಯಕ್ತಿಗಳು ಧರಿಸಿರುವ ವಸ್ತ್ರ ಗಮನಿಸಿದರೆ, ಅವರು ಅರೇಬಿಯನ್ ಜನರ ವಸ್ತ್ರ ಕಮೀಸ್ ಧರಿಸಿದ್ದಾರೆ. ಹಾಗಾಗಿ, ವೈರಲ್ ವಿಡಿಯೋ ಗುಜರಾತ್‌ನ ಅದಾನಿ ಬಂದರಿನದ್ದಲ್ಲ ಎಂದು ಖಚಿತಪಡಿಸಿಬಹುದು.

ನಾವು ವೈರಲ್ ವಿಡಿಯೋವನ್ನು ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸಿದಾಗ, ವಿಡಿಯೋದಲ್ಲಿನ ಅನೇಕ ಅಂಶಗಳು ಆ ವಿಡಿಯೋ ಇರಾಕ್‌ನ ಉಮ್ಮ್‌ ಕಸ್ರ್‌ ಬಂದರಿನದ್ದು ಮತ್ತು ಅಲ್ಲಿ ಟ್ರಕ್‌ಗಳಲ್ಲಿ ತುಂಬಿರುವ ಸಾವಿರಾರು ಜಾನುವಾರುಗಳು ಮುಸ್ಲಿಮರ ಹಬ್ಬ ಬಕ್ರೀದ್‌ಗಾಗಿ ಅರಬ್ ರಾಷ್ಟ್ರಗಳಿಗೆ ಸಾಗಿಸುತ್ತಿರಬಹುದು ಎಂಬುವುದಕ್ಕೆ ಪುಷ್ಠಿ ನೀಡುತ್ತದೆ. ಹಾಗಾಗಿ, ಇದು ಗುಜರಾತ್‌ನ ಅದಾನಿ ಬಂದರಿನದ್ದಲ್ಲ ಎಂದು ಹೇಳಬಹುದು. 

Claim :  It is not proven that cows are being sent to Arab countries through Adani port in Gujarat.
Claimed By :  Anonymous
Fact Check :  False
Tags:    

Similar News