ಗಾಜಿಯಾಬಾದ್‌ನಲ್ಲಿ ಜನರು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಹಳೆಯ ವೀಡಿಯೋವನ್ನು ಕರ್ನಾಟಕಕ್ಕೆ ತಪ್ಪಾಗಿ ಸಂಬಂಧಿಸಲಾಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಜನರ ಗುಂಪೊಂದು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಿರುವ ಮತ್ತು ಮಹಿಳೆಯೊಬ್ಬರು ಚಪ್ಪಲಿಯಿಂದ ಥಳಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ಮುಸ್ಲಿಮರು ಪೊಲೀಸ್ ಅಧಿಕಾರಿಯನ್ನು ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ತುಣುಕನ್ನು ಪ್ರಸಾರ ಮಾಡಲಾಗಿದೆ. ಆದರೆ, ಇದು ಆಗಸ್ಟ್ ೨೦೧೮ ರಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಸಂಭವಿಸಿದ ಹಳೆಯ ಘಟನೆಯಾಗಿದೆ. ಇದು ಈ ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಜನರ ಗುಂಪು ನಿಂದನೆಗಳನ್ನು ಬಳಸುತ್ತಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸುವುದು ಮತ್ತು ತಲೆಗೆ ಸ್ಕಾರ್ಫ್ ಧರಿಸಿದ ಮಹಿಳೆ ಚಪ್ಪಲಿಯಿಂದ ಹೊಡೆಯುವ ೨೬ ಸೆಕೆಂಡ್‌ಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ತನ್ನ ಸಹೋದ್ಯೋಗಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಕ್ಲಿಪ್‌ನೊಂದಿಗೆ ಹಂಚಿಕೊಳ್ಳಲಾದ ಹಿಂದಿ ಶೀರ್ಷಿಕೆಯು ಹೀಗಿದೆ, “ಕರ್ನಾಟಕ ಸುದ್ದಿ! ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಮುಸ್ಲಿಮರು ಚಲನ್ ನೀಡಿದಾಗ ಪೊಲೀಸರನ್ನು ಥಳಿಸಿದ್ದಾರೆ. ಇದು ಕಾನೂನಿಗೆ ನೇರ ಸವಾಲು. ಭವಿಷ್ಯದಲ್ಲಿ ಭಾರತದಲ್ಲಿ ಏನಾಗುತ್ತದೆ, ದೇಶವನ್ನು ಯಾರು ನಡೆಸುತ್ತಾರೆ ಮತ್ತು ಪ್ರತಿಯೊಬ್ಬರ ಭವಿಷ್ಯ ಏನಾಗಬಹುದು ಎಂಬುದನ್ನು ಈ ವೀಡಿಯೊ ನಮಗೆ ಹೇಳುತ್ತದೆ” (ಅನುವಾದಿಸಲಾಗಿದೆ). ಪೋಷ್ಟ್ ಗಳಲ್ಲಿನ ಕರ್ನಾಟಕದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಉಲ್ಲೇಖವು ಈ ಘಟನೆಯು ಇತ್ತೀಚಿನದು ಎಂದು ಸೂಚಿಸುತ್ತದೆ.
ಅಕ್ಟೋಬರ್ ೧, ೨೦೨೪ ರಂದು ವೈರಲ್ ವೀಡಿಯೋ ಮತ್ತು ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಆಗಸ್ಟ್ ೨೮, ೨೦೧೮ ರಂದು ಪ್ರಕಟವಾದ ಪತ್ರಿಕಾ ನ್ಯೂಸ್‌ನ ಹಿಂದಿ ಸುದ್ದಿ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ವರದಿಯು ಅದೇ ದೃಶ್ಯವನ್ನು ಹೊಂದಿದೆ ಮತ್ತು ಘಟನೆಯು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಲೋನಿ ಗಡಿ ಪ್ರದೇಶದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯ ಮುಂದೆ ಕುಟುಂಬವು ಪೊಲೀಸ್ ಅಧಿಕಾರಿಯನ್ನು ಥಳಿಸಿದೆ ಎಂದು ಹೇಳುತ್ತದೆ. ವರದಿಯು ಘಟನೆಯ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ಒಳಗೊಂಡಿಲ್ಲ.
ಆಗಸ್ಟ್ ೨೮, ೨೦೧೮ ರಂದು ಪ್ರಕಟವಾದ ಪತ್ರಿಕಾ ನ್ಯೂಸ್ ವರದಿಯ ಸ್ಕ್ರೀನ್‌ಶಾಟ್.
ಪತ್ರಿಕಾ ನ್ಯೂಸ್ ವರದಿಯಿಂದ ಸೂಚನೆಯನ್ನು ತೆಗೆದುಕೊಂಡು, ನಾವು ಈ ವಿವರಗಳೊಂದಿಗೆ ಕೀವರ್ಡ್ ಸರ್ಚ್ ನಡೆಸಿದ್ದೇವೆ ಮತ್ತು ಅದೇ ದಿನಾಂಕದಂದು ಪ್ರಕಟಿಸಲಾದ ಟೈಮ್ಸ್ ಆಫ್ ಇಂಡಿಯಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಆಗಸ್ಟ್ ೨೭, ೨೦೧೮ ರಂದು ಗಾಜಿಯಾಬಾದ್‌ನ ಬಲರಾಮ್ ನಗರದಲ್ಲಿರುವ ಲೋನಿ ಗಡಿ ಪ್ರದೇಶದ ಎಸ್‌ಬಿಐ ಶಾಖೆಯಲ್ಲಿ ಈ ಘಟನೆ ನಡೆದಿದೆ ಎಂದು ಅದು ಹೇಳಿದೆ. ಆಧಾರ್ ಕಾರ್ಡ್ ದಾಖಲಾತಿ ಸಮಯದಲ್ಲಿ, ಇಮ್ರಾನ್ ಎಂಬ ವ್ಯಕ್ತಿ ಸರತಿ ಸಾಲನ್ನು ಬಿಟ್ಟು ನೇರವಾಗಿ ಬ್ಯಾಂಕ್ ಅಧಿಕಾರಿಯ ಬಳಿಗೆ ಹೋದರು ಎಂದು ವರದಿಯಾಗಿದೆ.
ಇದೇ ರೀತಿ ವರದಿ ಮಾಡಿರುವ ಇಂಡಿಯಾ.ಕಾಮ್ ನ ಪ್ರಕಾರ ಬ್ಯಾಂಕ್ ಅಧಿಕಾರಿಯು ಆತನ ನಡವಳಿಕೆಯನ್ನು ವಿರೋಧಿಸಿದರು ಮತ್ತು ಅಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಯನ್ನು ಕರೆದರು, ಅವರು ಬ್ಯಾಂಕ್ ಭದ್ರತಾ ಸಿಬ್ಬಂದಿಯ ಸಹಾಯದಿಂದ ಆತನನ್ನು ಅಲ್ಲಿಂದ ಹೊರಹಾಕಿದರು. ಆತ ಕುಟುಂಬ ಸದಸ್ಯರೊಂದಿಗೆ ಹಿಂತಿರುಗಿ ವಾಗ್ವಾದ ನಡೆಸಿದನು. ವರದಿಯ ಪ್ರಕಾರ, ವಾಗ್ವಾದ ಮುಂದುವರಿದಾಗ, ಕಾನ್‌ಸ್ಟೆಬಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ, ಇದು ವೈರಲ್ ವೀಡಿಯೋದಲ್ಲಿ ಕಂಡುಬರುವಂತೆ ಕುಟುಂಬ ಸದಸ್ಯರು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡುವುದಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ ೨೮, ೨೦೧೮ ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿಯ ಸ್ಕ್ರೀನ್‌ಶಾಟ್.
ಆಗಸ್ಟ್ ೨೭, ೨೦೧೮ ರಂದು ಪೊಲೀಸ್ ಕಮಿಷನರೇಟ್ ಗಾಜಿಯಾಬಾದ್ ಎಕ್ಸ್ ನಲ್ಲಿ ಹಂಚಿಕೊಂಡ ಅಧಿಕೃತ ಹೇಳಿಕೆಯನ್ನು ನಾವು ಕಂಡುಕೊಂಡಿದ್ದೇವೆ. ಪೋಷ್ಟ್ ನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ, ವೈರಲ್ ವೀಡಿಯೋದಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಗಾಜಿಯಾಬಾದ್ ಎಸ್‌ಎಸ್‌ಪಿ ವೈಭವ್ ಕೃಷ್ಣ (ಐಪಿಎಸ್) ಹೇಳಿದ್ದಾರೆ.
ಇದೇ ವೀಡಿಯೋ ೨೦೨೧ ರಲ್ಲಿ ಬರೇಲಿಯಲ್ಲಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬರೇಲಿ ಪೊಲೀಸರು, ಇದು ೨೦೧೮ ರಲ್ಲಿ ಗಾಜಿಯಾಬಾದ್‌ನಿಂದ ನಡೆದ ಘಟನೆ ಎಂದು ಎಕ್ಸ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಯ ಬಗ್ಗೆ ಕರ್ನಾಟಕದಿಂದ ಯಾವುದೇ ವಿಶ್ವಾಸಾರ್ಹ ವರದಿಗಳು ಬಂದಿಲ್ಲ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಉತ್ತರ ಪ್ರದೇಶದಿಂದ ೨೦೧೮ ರಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಜನರ ಗುಂಪನ್ನು ಒಳಗೊಂಡ ಘಟನೆಯನ್ನು ತೋರಿಸುತ್ತದೆ ಎಂದು ಬಹಿರಂಗಪಡಿಸುತ್ತದೆ. ಇದು ಇತ್ತೀಚೆಗಿನ ಘಟನೆಯಲ್ಲ ಅಥವಾ ಕರ್ನಾಟಕದಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪು.